Ticker

6/recent/ticker-posts

ಹಚ್ಚೇವು ಕನ್ನಡದ ದೀಪ - ಡಿ. ಎಸ್. ಕರ್ಕಿ


"ಹಚ್ಚೇವು ಕನ್ನಡದ ದೀಪ" ಎಂದು ಹಾಡಿದ ದುಂಡಪ್ಪ ಸಿದ್ದಪ್ಪ ಕರ್ಕಿಯವರು ನವೋದಯ ಕಾಲದ ಕವಿಗಳು. ಇವರು ಬೆಳಗಾವಿ ಜಿಲ್ಲೆಯ ಹಿರೆಕೊಪ್ಪ ಗ್ರಾಮದಲ್ಲಿ ೧೯೦೭ ನವೆಂಬರ್ ೧೫ರಂದು ಜನಿಸಿದರು. ಇವರ ತಾಯಿ ದುಂಡವ್ವ ; ತಂದೆ ಸಿದ್ದಪ್ಪ.
ಚಿಕ್ಕಂದಿನಲ್ಲಿಯೆ ತಾಯಿಯನ್ನು ಕಳೆದುಕೊಂಡ ಇವರ ಪ್ರಾಥಮಿಕ ಶಿಕ್ಷಣ ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ ಆಯಿತು. ಬೆಳಗಾವಿಯ ಗಿಲಗಂಜಿ ಅರಟಾಳ ಹಾಯಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದ ಕರ್ಕಿಯವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಭ್ಯಾಸದ ನಂತರ ೧೯೩೫ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ೧೯೪೦ರಲ್ಲಿ ಬಿ.ಟಿ. ಪದವಿಯನ್ನು ಪಡೆದು ಗಿಲಗಂಜಿ ಅರಟಾಳ ಹಾಯಸ್ಕೂಲಿನಲ್ಲಿಯೇ ಶಿಕ್ಷಕರಾದರು. ೧೯೪೯ರಲ್ಲಿ “ಕನ್ನಡ ಛಂದಸ್ಸಿನ ವಿಕಾಸ” ಮಹಾಪ್ರಬಂಧಕ್ಕಾಗಿ ಪಿ.ಎಚ್‍ಡಿ. ಪಡೆದರು.
೧೯೫೬ರಲ್ಲಿ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ೧೯೬೬ರಲ್ಲಿ ನಿವೃತ್ತರಾದರು. ಆ ನಂತರ ನರೇಗಲ್ಲ ಕಾಲೇಜಿನ ಪ್ರಥಮ ಪ್ರಾಚಾರ್ಯರಾದರು.
ನಿವೃತ್ತಿಯ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾಗಿ ಅನೇಕ ವರ್ಷಗಳವರೆಗೆ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾದರು. ಇವರು ಸುಮಾರು ೧೧ ಕೃತಿಗಳನ್ನು ರಚಿಸಿದ್ದಾರೆ. ಇವರ “ಗೀತ ಗೌರವ” ಕೃತಿಗೆ ೧೯೭೨ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.

ಸಾಹಿತ್ಯ
ಕರ್ಕಿಯವರು ಏಳು ಕವನಸಂಕಲನಗಳನ್ನು, ಎರಡು ಮಕ್ಕಳ ಕವನಸಂಕಲನಗಳನ್ನು ಹಾಗು ಎರಡು ಪ್ರಬಂಧಸಂಕಲನಗಳನ್ನು ನೀಡಿದ್ದಾರೆ. ಇವರ ಕೆಲವು ಸಂಕಲನಗಳು ಈ ರೀತಿಯಾಗಿವೆ:

ಕವನಸಂಕಲನಗಳು
ನಕ್ಷತ್ರಗಾನ
ಭಾವತೀರ್ಥ
ಗೀತಗೌರವ
ನಮನ
ಕರ್ಕಿ ಕಣಗಲ

ಮಕ್ಕಳ ಕವನಗಳು
ಬಣ್ಣದ ಚೆಂಡು
ತನನ ತೋಂ

ಪ್ರಬಂಧ ಸಂಕಲನ
ನಾಲ್ದೆಸೆಯ ನೋಟ

ಸನ್ಮಾನ
೧೯೭೨ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪಿ.ಇ.ಎನ್. ಸಂಸ್ಥೆಯಿಂದ ಫ್ರಾನ್ಸ್ ಹಾಗು ರಶಿಯಾ ದೇಶಗಳ ಭೇಟಿ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಹಾಗು ಸಿಂಡಿಕೇಟ್ ಸದಸ್ಯ

ಡಿ.ಎಸ್. ಕರ್ಕಿಯವರು ೧೯೮೪ ಜನೆವರಿ ೧೬ರಂದು ನಿಧನರಾದರು.
                                                                                                   - ನೆನಪಿನಂಗಳ 

Post a Comment

0 Comments