ಕರ್ನಾಟಕದ ಪ್ರಸಿದ್ಧ ನಾಗಾರಾಧನೆ ದೇವಾಲಯಗಳು ನಾಗರಪಂಚಮಿ: ಹಬ್ಬಗಳೆಂದರೆ ಸಂಭ್ರಮ, ಸಡಗರ. ನಾಗಪಂಚಮಿ ವಿಶಿಷ್ಟ ಸೊಗಡಿನ, ಅತೀವ ಸಂಭ್ರಮದ ಹಬ್ಬ. ಬಂಧು ಬಾಂಧವರನ್ನು, ಸ್ನೇಹಿತರನ್ನು ಕರೆದು ಮನದ ಬೇಗುದಿಗಳನ್ನೆಲ್ಲ ಬದಿಗೊತ್ತಿ ದೇವರನ್ನು, ಭಕ್ತಿಯಿಂದ ಪೂಜಿಸಿ, ಹಬ್ಬದಡಿಗೆ ಮಾಡಿ, ಸಿಹಿ ಹಂಚಿ ಸಂಭ್ರಮದಿಂದ ಆಚರಿಸುವ ಈ ನಾಗರ ಪಂಚಮಿ ವಿಶೇಷವಾದ ಹಬ್ಬ.
ಬಾಗಿಲುಗಳನ್ನು ತಳಿರು ತೋರಣದಿಂದ ಸಿಂಗರಿಸಿ, ಅಂಗಳದಲ್ಲಿ ರಂಗವಲ್ಲಿಯಿಂದ ದೊಡ್ಡದಾಗಿ ನಾಗನನ್ನು ಚಿತ್ರಿಸಿ, ಮುಖ್ಯದ್ವಾರದ ಹೊಸ್ತಿಲ ಮುಂದೆ ರಂಗೋಲಿಯಿಂದ ನಾಗರಾಜನು ಮನೆಯ ಒಳಗೆ ಬರುವಂತೆ ಚಿತ್ರಿಸುವುದು. ಮರುದಿನ ಮನೆಯಿಂದ ಹೊರ ಹೋಗುವಂತೆ ಚಿತ್ರಿಸುವುದು ವಿಶೇಷ ಪದ್ದತಿ.
ಹಬ್ಬದ ದಿನದಂದು ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸುವುದು ವಾಡಿಕೆ. ನಾಗಪಂಚಮಿ ಯಂದು ರಾಜ್ಯದ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ನಾಗಾರಾಧನೆಗೆ ಪ್ರಸಿದ್ದಿಯಾದ ಕರ್ನಾಟಕದ ಕೆಲವು ಮುಖ್ಯ ದೇವಾಲಯಗಳನ್ನು ಇಲ್ಲಿ ನೋಡೋಣ ..
ಕುಕ್ಕೆ ಸುಬ್ರಹ್ಮಣ್ಯ - ದಕ್ಷಿಣ ಕನ್ನಡ
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾಗಾರಾಧನೆಗೆ ಪ್ರಸಿದ್ದಿಯಾಗಿದೆ. ಪ್ರಕೃತಿ ಸೌಂದರ್ಯದ ನಡುವಿನ ಈ ದೇವಾಲಯದಲ್ಲಿ ಈಶ್ವರ ಪುತ್ರ ಷಣ್ಮುಖನನ್ನು ನಾಗರೂಪದಲ್ಲಿ ಸುಬ್ರಹ್ಮಣ್ಯ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆ ಸರ್ಪ ರಾಜನಾದ ವಾಸುಕಿಗೆ ಸಲ್ಲುತ್ತದೆ ಎಂಬ ನಂಬಿಕೆ ಇದೆ.
ಜಾತಕಗಳಲ್ಲಿನ ನಾಗ ದೋಷ, ಕಾಳ ಸರ್ಪ ದೋಷ ಇತ್ಯಾದಿ ದೋಷಗಳ ಕಾರಣದಿಂದ ಅನಾರೋಗ್ಯ, ವಿವಾಹ ವಿಳಂಬ, ವೈವಾಹಿಕ ಸುಖಭಂಗ, ಪುತ್ರ ಹೀನತೆ, ಸಂತಾನ ಹೀನತೆ, ಉದ್ಯೋಗದಲ್ಲಿ ಅಸಮಾಧಾನ ಇತ್ಯಾದಿ ತೊಂದರೆಗಳನ್ನು ಅನುಭವಿಸುತ್ತಿರುವವರು ಪರಿಹಾರ ಮಾಡಿಸಲು ಪ್ರಪಂಚದ ವಿವಿಧ ಕಡೆಗಳಿಂದ ಈ ಕ್ಷೇತ್ರಕ್ಕೆ ಬರುತ್ತಾರೆ. ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಇತ್ಯಾದಿ ಸೇವೆ ಸಲ್ಲಿಸಿ ದೋಷಮುಕ್ತರಾಗಿದ್ದಾರೆ.
ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವಗಳ ಕಾಲದಲ್ಲಿ ಭಕ್ತರು ದೈಹಿಕ ಹಾಗೂ ಮಾನಸಿಕ ಸಂಕಷ್ಟಗಳ ನಿವಾರಣೆ ಹೇಳಿಕೊಂಡಿರುವ ಹರಕೆ ಬೀದಿ ಮಡೆಸ್ನಾನ (ಉರುಳು ಸೇವೆ) ಮಾಡುತ್ತಾರೆ. ಮೂಲ ಮೃತ್ತಿಕೆ (ಹುತ್ತದ ಮಣ್ಣು) ಇಲ್ಲಿ ಮುಖ್ಯ ಪ್ರಸಾದ.
ಘಾಟಿ ಸುಬ್ರಹ್ಮಣ್ಯ - ದೊಡ್ಡ ಬಳ್ಳಾಪುರ
ಲಕ್ಷಾಂತರ ಭಕ್ತರು ನಾಗಾರಾಧನೆ ನಡೆಸುವ ಪ್ರಸಿದ್ದ ನಾಗ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಷ್ಟೇ ದಕ್ಷಿಣ ಕರ್ನಾಟಕದಲ್ಲಿ ಘಾಟಿ ಪ್ರಸಿದ್ದವಾಗಿದೆ. ಈ ಕ್ಷೇತ್ರ ದೊಡ್ಡ ಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿಯಲ್ಲಿದೆ. ಹರಕೆ ಹೊತ್ತ ಭಕ್ತರು ನಾಗಾರಾಧನೆಯಲ್ಲಿ ತೊಡಗಿಸಿಕೊಳ್ಳುವ ದೃಶ್ಯ ನಿತ್ಯ ಕಂಡು ಬರುತ್ತದೆ. ನಾಗದೋಷ ನಿವಾರಣೆಗೆ ಭಕ್ತಾದಿಗಳು ನಾಗರ ಪಂಚಮಿಯಂದು ಸಾಗರೋಪಾದಿಯಲ್ಲಿ ಸೇರುತ್ತಾರೆ.
ಇಲ್ಲಿನ ನಾಗರಕಲ್ಲುಗಳು ಘಾಟಿ ವಿಶೇಷಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ನಾಗರ ಕಲ್ಲಿಗೆ ಹಾಲೆರೆಯುವ ಸಂಪ್ರದಾಯ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿ ನಾಗರ ಕಲ್ಲುಗಳಿಗೆ ಹಾಲೆರೆದರೆ ನಾಗದೋಷ ಕಳೆಯುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳಿವೆ. ನಾಗರ ಪಂಚಮಿ ದಿನ ಕ್ಷೀರಾಭಿಷೇಕ ಇಲ್ಲಿನ ಪ್ರಮುಖ ಆಕರ್ಷಣೆ. ನಾಗರ ಪಂಚಮಿ ದಿನ ಮುಂಜಾನೆ 5 ರಿಂದಲೇ ವಿಶೇಷ ಅಭಿಷೇಕಗಳು ನೆರವೇರುತ್ತವೆ.
ಅಂತ್ಯ ಸುಬ್ರಹ್ಮಣ್ಯ - ತುಮಕೂರು
ನಾಗಲಮಡಿಕೆ ಪಾವಗಡ ತಾಲೂಕಿನ ನಾಗಲಮಡಿಕೆಯ ಅಂತ್ಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ರಾಜ್ಯದ ಪ್ರಮುಖ ನಾಗಾ ಕ್ಷೇತ್ರಗಳಲ್ಲಿ ಒಂದು. ಕುಕ್ಕೆ ಯನ್ನು ಆದಿ ಎಂದು, ಘಾಟಿ ಯನ್ನು ಮಧ್ಯ ಎಂದೂ, ನಾಗಲಮಡಿಕೆ ಯನ್ನು ಅಂತ್ಯ ಎಂದು ಕರೆಯುವುದುಂಟು.
ನಾಗಲಮಡಿಕೆಯಿಂದ ಭಕ್ತನೊಬ್ಬ ಕುಕ್ಕೆ ಜಾತ್ರೆಗೆ ಹೋಗುತ್ತಿದ್ದು, ಒಮ್ಮೆ ಹೋಗಲಿಕ್ಕೆ ಸಾಧ್ಯವಾಗದಿದ್ದ ಆತನಿಗೆ ನಾಗಲಮಡಿಕೆ ಬಂದು ನೆಲೆಸುತ್ತೇನೆ ಎಂದು ಕನಸಿನಲ್ಲಿ ದೇವರು ಹೇಳಿದ್ದರಂತೆ. ಬಳಿಕ ಹೊಲ ಉಳುವಾಗ 7 ಅಡಿ ನಾಗರ ವಿಗ್ರಹ ದೊರಕಿದ್ದು, ಸುಬ್ರಹ್ಮಣ್ಯ ಸ್ವಾಮಿಯೇ ಇಲ್ಲಿ ನೆಲೆಸಿದ್ದಾನೆಂಬ ಪ್ರತೀತಿ ಇದೆ.
ನಾಗಲಮಡಿಕೆ ಉತ್ತರ ಪಿನಾಕಿನಿ ಹಳ್ಳದ ದಂಡೆಯಲ್ಲಿದ್ದು, 500 ವರ್ಷಗಳ ಇತಿಹಾಸ ಹೊಂದಿದೆ. ಮದುವೆಯಾಗದ, ಮಕ್ಕಳಾಗದ, ಕಿವಿ ಸೋರುವಿಕೆ ಮತ್ತಿತರ ರೋಗ ರುಜಿನ ಗಳಿಂದ ನರಳುತ್ತಿರುವವರು ವಿಶೇಷ ಪೂಜೆ ಸಲ್ಲಿಸುತ್ತಾರೆ.
ಸರ್ಪ ದೋಷ ನಿವಾರಣೆ ಮತ್ತಿತರ ಪೂಜೆ ನಡೆಯುತ್ತದೆ. ನಿಜ ನಾಗರಹಾವು ಇಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ. ಪ್ರತಿ ವರ್ಷ ಡಿಸೆಂಬರ್ ನಲ್ಲಿ ಜಾತ್ರೆ ಮತ್ತು ದನಗಳ ಜಾತ್ರೆ ನಡೆಯುತ್ತದೆ. ಹೈಕೋರ್ಟ್ ನಿಷೇಧ ಹೇರಿದ್ದರಿಂದ 5 ವರ್ಷದಿಂದ ಮಡೆಸ್ನಾನ ಆಚರಣೆ ನಿಂತಿದೆ.
ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರ - ಉತ್ತರ ಕನ್ನಡ
ಹೊನ್ನಾವರ ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರ ನಾಗಾರಾಧನೆಗೆ ವಿಶೇಷ ಮಹತ್ವ ಪಡೆದಿರುವ ಪುರಾಣ ಪ್ರಸಿದ್ದ ಕ್ಷೇತ್ರ. ನಾಗರ ಪಂಚಮಿ ಅಂಗವಾಗಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಜರುಗಲಿದ್ದು, ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುವರು. ನಾರದ ಮುನಿ ಯಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರ ಎಂಬ ಪ್ರತೀತಿ ಇದೆ.
ಈ ಕ್ಷೇತ್ರದಲ್ಲಿ ಸಂತಾನ ಪ್ರಾಪ್ತಿ, ಚರ್ಮ ವ್ಯಾಧಿ, ದೃಷ್ಟಿ ದೋಷ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಹರಕೆಗಳನ್ನು ಹೊತ್ತು ಪೂಜೆ ಸಲ್ಲಿಸಲಾಗುತ್ತದೆ. ದೇವಸ್ಥಾನ ಮುಂಭಾಗದಲ್ಲಿ ಪವಿತ್ರವಾದ ಸುಬ್ರಹ್ಮಣ್ಯ ತೀರ್ಥ ವಿದ್ದು, ಭಕ್ತರು ಇಲ್ಲಿ ತೀರ್ಥ ಪ್ರೋಕ್ಷಣೆ ಮಾಡಿ ದೇವರ ಪೂಜೆ ನಡೆಸುತ್ತಾರೆ.
ಸುಬ್ರಹ್ಮಣ್ಯನಿಗೆ ಅತ್ಯಂತ ಇಷ್ಟವಾದ ಬಾಳೆಗೊನೆ, ಅಪೂಪ ಸೇವೆ ಹಾಗೂ ಕುಂಬಳ ಕಾಯಿ ನೈವೇದ್ಯ ಸೇವೆ ನೀಡುವರು. ದೇವಸ್ಥಾನದ ಸಮೀಪದ ನಾಗ ಬನದಲ್ಲಿ ಈ ಹಿಂದೆ ನಾಗರ ಪ್ರತಿಷ್ಠಾಪನೆ ಮಾಡಿದವರು ಹಾಗೂ ಭಕ್ತರು ನಾಗರ ಪಂಚಮಿ ದಿನ ಹಾಲೆರೆದು ಪೂಜೆ ಸಲ್ಲಿಸುತ್ತಾರೆ.
ಶ್ರೀ ಅನಂತಪದ್ಮನಾಭ ದೇವಸ್ಥಾನ - ಮಂಗಳೂರು
ಸಾವಿರಾರು ವರ್ಷಗಳ ಇತಿಹಾಸವಿರುವ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ ನಾಗಾರಾಧನೆಯಲ್ಲಿ ಮಹತ್ವದ ಕ್ಷೇತ್ರ,ಮಂಗಳೂರು ನಗರದಿಂದ 10 ಕಿ.ಮೀ. ದೂರದಲ್ಲಿ ಈ ದೇವಳ, ನಾಗಬನ ದೇವಸ್ಥಾನದ ಪೂರ್ವ ಭಾಗದಲ್ಲಿ ನೆಲೆಗೊಂಡಿದ್ದರೂ ಪಶ್ಚಿಮಕ್ಕೆ ಮುಖ ಮಾಡಿದೆ. ನಾಗ ಬನದಲ್ಲಿ ಸುಮಾರು 300 ಸರ್ಪ ವಿಗ್ರಹ ಗಳಿವೆ.
ನಾಗರ ಪಂಚಮಿಯಂದು ಮುಂಜಾನೆ ಅನಂತ ಪದ್ಮನಾಭ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ನಾಗದೇವರಿಗೆ ತಂಬಿಲ ಪೂಜೆ ನಡೆಯುತ್ತದೆ. ಮಧ್ಯಾಹ್ನ ವಿಶೇಷ ಪೂಜೆ, ಮಂಗಳಾರತಿ ಹಾಗೂ ರಾತ್ರಿ ಮಹಾಪೂಜೆ ನಡೆಯುತ್ತದೆ. ಸಕಲ ಸರ್ಪ ದೋಷ ನಿವಾರಣೆಗೆ, ಸಂತಾನ ಭಾಗ್ಯಕ್ಕೆ ಭಕ್ತರ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಮಾರ್ಗಶಿರ ಶುದ್ಧ ಪಾಡ್ಯ ಕೊಪ್ಪರಿಗೆ ಮೂಹೂರ್ತದಿಂದ ಮಾರ್ಗಶಿರ ಶುದ್ಧ ಷಷ್ಠಿ ತನಕ ವಾರ್ಷಿಕ ಉತ್ಸವ ನಡೆಯುತ್ತದೆ. ಭಾದ್ರಪದ ಶುದ್ಧ ಶುಕ್ಲ ಪಕ್ಷದ ಮೂರನೇ ದಿನದಂದು ತೆನೆ, ಉತ್ಸವ ಆಚರಿಸಲಾಗುತ್ತದೆ. ಆಶ್ಲೇಷ ಬಲಿ ಈ ಕ್ಷೇತ್ರದಲ್ಲಿ ವಿಶೇಷ ಸೇವೆ. ಏಕಾದಶಿ ಮತ್ತು ಶ್ರೀ ಕ್ಷೇತ್ರದ ಉತ್ಸವಗಳ ಸಮಯ ಬಿಟ್ಟು ಉಳಿದ ಎಲ್ಲ ದಿನಗಳಲ್ಲಿ ಈ ಸೇವೆ ಮಾಡಲಾಗುತ್ತದೆ.
ಮತ್ತಿತಾಳೇಶ್ವರ ಕ್ಷೇತ್ರ - ಮಂಡ್ಯ
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮತ್ತಿತಾಳೇಶ್ವರ ಕ್ಷೇತ್ರದಲ್ಲಿ ನಾಗರಪಂಚಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿನ ಕೊಳದಲ್ಲಿ ಸ್ನಾನ ಮಾಡಿದ ಕೆಲವೇ ದಿನಗಳಲ್ಲಿ ಚರ್ಮ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಚರ್ಮಕಾಯಿಲೆ ಇರುವ ಸಹಸ್ರಾರು ಜನತೆ ಪ್ರತಿ ಭಾನುವಾರ - ಗುರುವಾರ ಆಗಮಿಸಿ ಕೊಳದಲ್ಲಿ ಸ್ನಾನ ಮಾಡಿ, ಭಕ್ತಿಯಿಂದ ಮತ್ತಿತಾಳೇಶ್ವರ ಹಾಗೂ ನಾಗರ ಕಲ್ಲು ಗಳಿಗೆ ಪೂಜೆ ಸಲ್ಲಿಸುತ್ತಾರೆ.
ಇಲ್ಲಿ ಮುನಿಯೊಬ್ಬರು ತಪಸ್ಸಿಗೆ ಕುಳಿತಾಗ ಸುತ್ತಲು ಹುತ್ತ ಬೆಳೆದಿರುತ್ತದೆ. ಸಮೀಪದ ಕಲ್ಲುವೀರನಹಳ್ಳಿ ಪಟೇಲ ಈರಂಕೇಗೌಡರ ಹಸುವೊಂದು ನಿತ್ಯ ಹುತ್ತದ ಮೇಲೆ ನಿಂತು ಹಾಲು ಕರೆಯುತ್ತಿರುತ್ತದೆ. ಇದನ್ನು ಗಮನಿಸಿದ ಪಟೇಲ ಹುತ್ತ ಬೇರ್ಪಡಿಸಿ ನೋಡಿದಾಗ ಶಿವಲಿಂಗ ಇರುವುದನ್ನು ಕಂಡು ದೇವಸ್ಥಾನ ನಿರ್ಮಿಸಿದನು ಎಂಬ ಇತಿಹಾಸವಿದೆ. ಮಳವಳ್ಳಿ ಪಟ್ಟಣದಿಂದ ದೇವಸ್ಥಾನ 7 ಕಿ.ಮೀ. ದೂರದಲ್ಲಿದೆ. ವಿಶೇಷ ದಿನಗಳಲ್ಲಿ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆಯಿದೆ.
ವಿದುರಾಶ್ವತ್ಥ ದಲ್ಲಿ ಇಷ್ಟಾರ್ಥ ಸಿದ್ಧಿ - ಚಿಕ್ಕಬಳ್ಳಾಪುರ
ರಾಜ್ಯದ ಇತರ ಧಾರ್ಮಿಕ ಕ್ಷೇತ್ರ ಗಳಂತೆ ವಿದುರಾಶ್ವತ್ಥ ಕೂಡ ನಾಗ ದೇವರ ಪೂಜೆಗೆ ಹೆಸರುವಾಸಿ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿರುವ ಈ ಕ್ಷೇತ್ರ, ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ದೇಶಪ್ರೇಮಿಗಳು ಸಭೆ ಸೇರುತ್ತಿದೆ ಸ್ಥಳವೂ ಇದಾಗಿತ್ತು. ಮಹಾಭಾರತ ಕಾಲದಲ್ಲಿ ಧೃತರಾಷ್ಟ್ರನ ಮಂತ್ರಿಯಾಗಿದ್ದ ವಿದುರನು ಅಶ್ವತ್ಥ ಸಸಿ ನೆಟ್ಟು (ಈ ದೊಡ್ಡ ವೃಕ್ಷವು 2001ರಲ್ಲಿ ಬಿದ್ದು ಹೋಗಿದೆ) ಬೆಳೆಸಿದನು. ಇದರಿಂದ ಈ ಸ್ಥಳವು ವಿದುರಾಶ್ವತ್ಥ ಎಂಬುದಾಗಿ ಖ್ಯಾತಿ ಪಡೆಯಿತು.
ಇಲ್ಲಿ ಪುರಾತನ ಅಶ್ವಥ್ ನಾರಾಯಣಸ್ವಾಮಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಇದೇ. ಸಹಸ್ರಾರು ಸಂಖ್ಯೆಯಲ್ಲಿ ನಾಗರಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮದುವೆ ಆಗದಿದ್ದವರು ಹಾಗೂ ಸಂತಾನ ಭಾಗ್ಯ ಇಲ್ಲದವರು ಇಲ್ಲಿಗೆ ಬಂದು ನಾಗರಮೂರ್ತಿ ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಿದರೆ ಮನೋಭಿಷ್ಠ ಈಡೇರುತ್ತದೆ ಎನ್ನುವುದು ನಂಬಿಕೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಮುಕ್ತಿನಾಗ
- ಬೆಂಗಳೂರು
ಸರ್ಪಕ್ಷೇತ್ರ ಎಂದು ಹೆಸರುವಾಸಿ ಯಾಗಿರುವ ಬೆಂಗಳೂರಿನ ಕೆಂಗೇರಿ ಸಮೀಪದ ಮುಕ್ತಿನಾಗ, ಹೆಸರಿಗೆ ತಕ್ಕಂತೆ ನಾಗದೋಷಕ್ಕೆ ಮುಕ್ತಿ ನೀಡಿದ ಪುಣ್ಯ ಕ್ಷೇತ್ರವಾಗಿದೆ. ನಾಗಕಲ್ಲುಗಳ ಮಂಟಪ, 16 ಅಡಿ ಎತ್ತರದ 7 ಹೆಡೆ ಗಳನ್ನು ಹೊಂದಿರುವ ಮುಖ್ಯ ನಾಗ ಪ್ರತಿಮೆ ಇಲ್ಲಿದೆ.
ನಾಗದೇವಿ ದೇವಾಲಯ ಕೂಡ ಇಲ್ಲಿದ್ದು, ಸರ್ಪದೋಷ ಪರಿಹಾರ ಪೂಜೆ, ಆಶ್ಲೇಷಾ ಬಲಿ ಹಾಗೂ ನಾಗ ಪ್ರತಿಷ್ಠಾಪನೆ ಗಳಿಂದ ಭಕ್ತರ ಇಷ್ಟಾರ್ಥಗಳು ನೆರವೇರಲಿದೆ. ದೇವಾಲಯದಲ್ಲಿ ಕೇವಲ ನಾಗಗಳೇ ಅಲ್ಲದೆ ಆದಿ ಮುಕ್ತಿನಾಗ, ನೀಲಾಂಬಿಕೆ, ಲಕ್ಷ್ಮೀನರಸಿಂಹ ಸ್ವಾಮಿ, ರೇಣುಕಾ ಯಲ್ಲಮ್ಮ, ಮೈಲಾರ ಲಿಂಗೇಶ್ವರ ಸ್ವಾಮಿ, ಪಟಾಲಮ್ಮ ದೇವತೆಗಳ ದರ್ಶನ ಭಾಗ್ಯವೂ ಸಿಗುತ್ತದೆ.
ಮುಕ್ತಿ ನಾಗ ಕ್ಷೇತ್ರ ಬೆಂಗಳೂರು - ಮೈಸೂರು ರಸ್ತೆಯಲ್ಲಿ ದೊಡ್ಡ ಆಲದ ಮರಕ್ಕೆ ಹೋಗುವ ಮಾರ್ಗದಲ್ಲಿ ಕೆಂಗೇರಿ ಯಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ. ರಾಮೋಹಳ್ಳಿ ಬಿಎಂಟಿಸಿ ಬಸ್ ವ್ಯವಸ್ಥೆ ಇದ್ದು, ರಾಮೋಹಳ್ಳಿ ಯಿಂದ ಆಟೋ ಮೂಲಕ ಮುಕ್ತಿ ನಾಗ ಕ್ಕೆ ತಲುಪಬಹುದು.
ಕಾಳಿಂಗೇಶ್ವರ ದೇವಸ್ಥಾನ - ಶಿವಮೊಗ್ಗ
ಸೊರಬ ತಾಲ್ಲೂಕು ಅಂಡಗಿ ಸಮೀಪದ ಉರಗನಹಳ್ಳಿ ಕಾಳಿಂಗೇಶ್ವರ ದೇವಸ್ಥಾನಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಕಾಳಿಂಗೇಶ್ವರ ದೇವಸ್ಥಾನದಲ್ಲಿ ಕಾರ್ಕೋಟಕ ಸರ್ಪವಿದೆ ಎಂಬ ನಂಬಿಕೆಯಿದೆ. ನಾಗರಹಾವನ್ನು ಕೆಣಕಿದ ಹಾಗೂ ಸಾಯಿಸಿದ ದೋಷ ಪರಿಹಾರಕ್ಕಾಗಿ ಸಾವಿರಾರು ಭಕ್ತರು ಇಲ್ಲಿಗೆ ಬಂದು ತಪ್ಪು ಹರಕೆ ಕಟ್ಟೆ ಪೂಜೆ ಮಾಡುತ್ತಾರೆ.
ನಳ ಮಹಾರಾಜನಿಗೆ ಶಾಪ ವಿಮೋಚನೆ ನೀಡಿದ ಸ್ಥಳವೇ ಉರಗನಹಳ್ಳಿ,'ಅಟ್ಟಿ ಹೋಗಬೇಡ ಮೆಟ್ಟಿದರೆ ಬಿಡಬೇಡ' ಎಂಬ ನುಡಿಯಂತೆ ಮೆಟ್ಟಿದರೂ ಅದಕ್ಕೆ ಪರಿಹಾರ ನೀಡುವ ಕಾಳಿಂಗ ದೇವಸ್ಥಾನ ಇದಾಗಿದೆ. ನಾಗಪಂಚಮಿ ದಿನ ಭಕ್ತರು ನಾಗದೇವರಿಗೆ ಹಾಲೆರೆದು ಭಕ್ತಿ ಮೆರೆಯುತ್ತಾರೆ. ದೇವಸ್ಥಾನದ ಆವರಣದಲ್ಲಿ ವಿಶೇಷವಾದ ಕಹಿ ಇಲ್ಲದ ಬೇವಿನ ಮರವಾದರೆ. 2009 ರಲ್ಲಿ ದೇವಸ್ಥಾನವನ್ನು ಹೊಸದಾಗಿ ನಿರ್ಮಿಸಲಾಗಿದೆ. ಗರ್ಭಗುಡಿಯಲ್ಲಿ ರಾಮಲಿಂಗೇಶ್ವರ, ನಂದೇಶ್ವರ, ಕಾಳಿಂಗೇಶ್ವರ, ಚಾಮುಂಡೇಶ್ವರಿ ವಿಗ್ರಹ ಗಳಿವೆ. ದೋಷ ನಿವಾರಣೆ, ಪರಿಹಾರಕ್ಕಾಗಿ ಭಕ್ತರ ಹೂವಿನ ಪ್ರಸಾದ ಪಡೆಯುತ್ತಾರೆ.
ಏಕಶಿಲೆಯ ಪುರುಷರೂಪಿ ನಾಗ - ಶಿವಮೊಗ್ಗ
ಏಕಶಿಲೆಯ ಅಪೂರ್ವ ಕೆತ್ತನೆಯಲ್ಲಿ ಮೈದಳೆದು ಪುರುಷರೂಪಿ ನಾಗದೇವರು, ಪ್ರಭಾವಳಿಯಲ್ಲಿ 77 ನಾಗರ ಹೆಡೆಗಳ ಚಿತ್ತಾಕರ್ಷಕ ಸೊಬಗು, ಪುರುಷರೂಪಿ ನಾಗರ ಹೆಡೆ, ಬಲ ಭಾಗದಲ್ಲಿ ಸ್ತ್ರೀ ದೇವತೆ ವಿಗ್ರಹ, ಭಕ್ತರ ಭಕ್ತಿ ಪರಾಕಾಷ್ಠೆ ಬಿಂಬಿಸುವ ಗರ್ಭಗುಡಿ ಸುತ್ತ ಸಾವಿರಾರು ನಾಗರ ಕಲ್ಲು ಗಳು.. ಇದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚಾ ಸಮೀಪದ ನಾಗರಹಳ್ಳಿ ನಾಗೇಂದ್ರ ಸ್ವಾಮಿ ದೇವಸ್ಥಾನದ ಚಿತ್ರ, 2,800 ವರ್ಷಗಳ ಹಿಂದೆ ಅಗತ್ಯ ಮಹಾಮುನಿಯಿಂದ ದೇವರ ಪ್ರತಿಷ್ಠಾಪನೆ ಯಾಗಿದೆ ಎಂದು ಶಾಸನಗಳಲ್ಲಿ ಉಲ್ಲೇಖವಿದೆ.
ವ್ಯಕ್ತಿಗೆ ಹಾವು ಕಚ್ಚಿದಾಗ ಶ್ರೀದೇವರಲ್ಲಿ ಹರಕೆ ಹೊತ್ತು ಇಲ್ಲಿನ ಹುತ್ತದ ಮಣ್ಣನ್ನು ಲೇಪಿಸಿದರೆ ವ್ಯಕ್ತಿ ಬದುಕುಳಿಯುತ್ತಾನೆಂಬುದು ಸ್ಥಳೀಯರ ನಂಬಿಕೆ. ಸಂತಾನ ಭಾಗ್ಯ, ವಿವಾಹಯೋಗ, ಮಕ್ಕಳ ಗಾಳಿ ಚೇಷ್ಟೆ ವಿವಿಧ ತೊಂದರೆಗಳಿಗೆ ನಾಗ ದೇವರಲ್ಲಿ ಹರಕೆ ಹೊತ್ತು ಅದರಂತೆ ನಡೆದರೆ ಸುಖಮಯ ಜೀವನ ಸಿದ್ಧಿಸುತ್ತದೆ ಎಂಬ ಮಾತಿದೆ. ನಾಗ ಸನ್ನಿಧಿಯಲ್ಲಿ ವರ್ಷಕ್ಕೆ ಎರಡು ಬಾರಿ ಜಾತ್ರೆ ನಡೆಯುತ್ತದೆ. ನಾಗರ ಪಂಚಮಿ ಹಾಗೂ ಕೊಳೆ ಪಂಚಮಿ ದಿನದ ಜಾತ್ರೆ ವಿಶೇಷ.
ಪ್ರಸನ್ನ ಸುಬ್ರಹ್ಮಣ್ಯೇಶ್ವರ - ಹಾಸನ
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಅಸಂಖ್ಯಾತ ಭಕ್ತರನ್ನು ಹೊಂದಿದೆ. ರಾಜ್ಯವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದಲೂ ಅಪಾರ ಭಕ್ತರು ಬರುತ್ತಾರೆ.
ದಕ್ಷಿಣ ಕನ್ನಡದ ಕುಕ್ಕೆಯಲ್ಲಿ 14ನೇ ವಿಭುದೇಶ ತೀರ್ಥರ ಆಶ್ರಮವೊಂದು ಬೆಂಕಿಗೆ ಆಹುತಿಯಾಗುತ್ತದೆ. ಆಗ ರಸ ವಿದ್ಯೆ ಅಂದರೆ, ಬಂಗಾರ ವಿದ್ಯೆ ಕಲಿತಿದ್ದ ತೀರ್ಥರು ಬಂಗಾರ ಗೋಪುರದ ಮುಚ್ಚಳದಿಂದ ಆಶ್ರಮ ಮುಚ್ಚಲು ಮುಂದಾಗುತ್ತಾರೆ.
ಇದನ್ನು ಕಂಡ ಬಲ್ಲಾಳ ರಾಜ ಆ ವಿದ್ಯೆ ಹೇಳಿಕೊಡುವಂತೆ ಪೀಡಿಸುತ್ತಾನೆ. ಹೇಳಿಕೊಟ್ಟರೆ ವಿದ್ಯೆ ನಶಿಸುತ್ತದೆ, ಹೇಳಿಕೊಡದಿದ್ದರೆ ರಾಜನಿಂದ ತೊಂದರೆ ಎಂದರಿತು ತೀರ್ಥರು ಶಿಷ್ಯ ವೇದಗರ್ಭನಿಗೆ ದೇವಸ್ಥಾನದ ಪೂಜೆ ಮುಂದುವರಿಸುವಂತೆ ತಿಳಿಸಿ ಲೋಕ ಸಂಚಾರ ಹೊರಡುತ್ತಾರೆ.
ರಾಮನಾಥಪುರಕ್ಕೆ ಬಂದು ಪೂಜೆ ಸಲ್ಲಿಸಿದ ನಂತರ ಸುಬ್ರಹ್ಮಣ್ಯೇಶ್ವರ ದೇವರು ಅಲ್ಲಿಂದ ಎದ್ದೇಳದೆ ಪ್ರತಿಷ್ಠಾಪಿಸಿ ಪೂಜಿಸೆಂದು ಹೇಳುತ್ತದೆ. ಹೊಳೆನರಸೀಪುರ ಪಾಳೇಗಾರ ನರಸಿಂಹ ನಾಯಕನ ಕನಸಿನಲ್ಲಿ ಕೇಳಿಸಿದ ಅಶರೀರವಾಣಿಯಂತೆ, ದೇವಸ್ಥಾನ ಕಟ್ಟಿಸುತ್ತಾನೆ.
ಚರ್ಮವ್ಯಾಧಿ ಇರುವವರು ದೇವಸ್ಥಾನದಲ್ಲಿ ಮೃತ್ತಿಕಾ ಪ್ರಸಾದ ಸ್ವೀಕರಿಸಿದರೆ ಪರಿಹಾರವಾಗಲಿದೆ. ಮಕ್ಕಳಿಲ್ಲದ ದಂಪತಿ ಪ್ರತಿ ದೊರೆಯುವ ನಂಬಿಕೆ ಇದೆ. ಅಮಾವಾಸ್ಯೆ ಬಳಿಕ ಬರುವ ಷಷ್ಠಿಯಲ್ಲಿ ಪ್ರದಕ್ಷಿಣೆ ಹಾಕಿದರೆ ಸಂತಾನ ಭಾಗ್ಯ ದೊರೆಯುವ ನಂಬಿಕೆ ಇದೆ.
ನಾಗೇಶ್ವರ
ದೇವಾಲಯ
- ಹಾಸನ
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನಾಗರನವಿಲೆ ಗ್ರಾಮದಲ್ಲಿರುವ ನಾಗೇಶ್ವರ ದೇವಾಲಯ ಪ್ರಸಿದ್ದಿ ಪಡೆದಿದೆ. ಅಧಿಕ ಸಂಖ್ಯೆಯಲ್ಲಿ ನಾಗರಹಾವು ಹಾಗೂ ನವಿಲುಗಳು ವಾಸಿಸುತ್ತಿದ್ದ ಪ್ರದೇಶವಾದ್ದರಿಂದ ನಾಗರ ನವಿಲೆ ಎಂಬ ಹೆಸರು ಬಂದಿದೆ. ಸರ್ಪದೋಷ, ಕಂಕಣ ಭಾಗ್ಯ, ಪುತ್ರ ಸಂತಾನಕ್ಕಾಗಿ ನಿತ್ಯ ನೂರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಪುರಾಣಗಳ ಪ್ರಕಾರ, ಉರಗ ಮಯೂರಪುರ ಎಂಬ ಹೆಸರಿನಿಂದ ಈ ಪ್ರದೇಶವನ್ನು ಕರೆಯಲಾಗುತ್ತಿತ್ತು.
ಋಷಿಮುನಿ ಜಮದಗ್ನಿ, ಪತ್ನಿ ರೇಣುಕಾದೇವಿ ಹಾಗೂ ಪುತ್ರ ಪರಶುರಾಮ ಲೋಕ ಪರ್ಯಟನೆ ಕೈಗೊಂಡಿದ್ದ ಸಂದರ್ಭ ಇಲ್ಲಿಗೆ ಭೇಟಿ ನೀಡಿ, ಉದ್ಭವವಾದ ನಾಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಇಲ್ಲಿಂದ 2 ಕಿ.ಮೀ. ದೂರದಲ್ಲಿರುವ ರೇಚನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದ ಜಮದಗ್ನಿ ದೇವಾಲಯಕ್ಕೆ ಬರುವುದಕ್ಕಾಗಿಯೇ ಸುರಂಗ ಕೊರೆಸಿದ್ದರು. ಇಂದಿಗೂ ಆ ಸುರಂಗವಿದೆ.
ನಾಗೇಶ್ವರ ದೇಗುಲ ಸುತ್ತ ಇತರ 5 ದೇವಾಲಯಗಳಿದ್ದು, ಅವೂ ಮಹತ್ವ ಪಡೆದಿವೆ. ನಾಗದೋಷ ನಿವಾರಣೆಗೆ ಮಜ್ಜನಬಾವಿ ನೀರಿನಿಂದ ಸ್ನಾನ ಮಾಡಿ ಮುಡಿಕೊಟ್ಟು ನಂತರ ಉರುಳು ಸೇವೆ ಮೂಲಕ ಹಣ್ಣುಕಾಯಿ ಅರ್ಪಿಸಬೇಕು. ಪ್ರಸಾದ ರೂಪದಲ್ಲಿ ನೀಡುವ ಹುತ್ತದ ಮಣ್ಣು ಮತ್ತು ಗಂಧ ಲೇಪಿಸಿಕೊಳ್ಳುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ ಎಂಬುದು ನಂಬಿಕೆ.
ಮಾಲಗತಿಯ ಆದಿಶೇಷ ಮಂದಿರ - ಕಲಬುರಗಿ
ಆದಿಶೇಷನ ಮಂದಿರಗಳು ಅಪರೂಪ. ಅಂತಹ ಆದಿಶೇಷನ ದೇವಸ್ಥಾನವೊಂದು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮಾಲಗತ್ತಿಯಲ್ಲಿದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ, ಈತನು ಕೇವಲ ಹಿಂದೂಗಳ ಆರಾಧ್ಯ ದೈವ ಮಾತ್ರವಲ್ಲದೆ ಮುಸ್ಲಿಂ ರಿಂದಲೂ ಪೂಜಿಸಿಕೊಳ್ಳುತ್ತಿದ್ದಾನೆ. ಪುಷ್ಕರಿಣಿಯಲ್ಲಿ ಸ್ನಾನ ಮಾಡಿದರೆ ರೋಗಗಳನ್ನು ಹಿರೋಡೇಶ್ವರ (ಆದಿಶೇಷ) ಗುಣಪಡಿಸುತ್ತಾರೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಪ್ರೀತಿಯ ತಂಗಿ ಬೀಬೀ ಫಾತೀಮಾ ಪ್ರೀತಿಯ ಅಣ್ಣನಿಗೆ ಕೂಗಿ ಕರೆಯಲು ಭಕ್ತರನ್ನು ಬಿಟ್ಟು ಪಲ್ಲಕ್ಕಿಯಲ್ಲಿ ಸಹೋದರಿಯತ್ತ ಓಡಿ ಬರುವ ವಿಶಿಷ್ಟ ಪದ್ಧತಿ ಇಲ್ಲಿದ್ದು, ಇದೊಂದು ಭಾವೈಕ್ಯತೆ ಸಂಕೇತವಾಗಿದೆ.
ಹಿರೋಡೇಶ್ವರ ಚೈತ್ರ ಮಾಸ ಕೃಷ್ಣ ಪಕ್ಷದ ಪ್ರಥಮ ಗುರುವಾರ ಬೆಳಗ್ಗೆ ಗ್ರಾಮ ಪ್ರವೇಶಿಸುತ್ತಾನೆ. ಇಲ್ಲಿನ ಪವಿತ್ರ ಪುಷ್ಕರಣಿ, ದೇವಸ್ಥಾನದ ಬಗ್ಗೆ ಸುಮಾರು ಐದು ಸಾವಿರ ವರ್ಷಕ್ಕಿಂತ ಹಳೆಯದಾದ ಸ್ಕಂದ ಪುರಾಣ ಗ್ರಂಥದಲ್ಲಿ ಉಲ್ಲೇಖವಾಗಿದೆ. ಪುರಾತನ ಗ್ರಂಥ ವಾದ ಪದ್ಯಪುರಾಣದಲ್ಲಿ ಇಲ್ಲಿ ಹರಿಯುವ ನದಿಯ ಮಹಾತ್ಮೆ ಹಾಗೂ ಆಸ್ತಿಕ ಮುನಿ ಆಶ್ರಯ ಪಡೆದ ಪಾವನ ಸ್ಥಳ ಇದಾಗಿದೆ ಎಂದು ಉಲ್ಲೇಖಿಸಲಾಗಿದೆ.
ಸೀಮಿ ನಾಗನಾಥ - ಬೀದರ್
ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಸೀಮಿ ನಾಗನಾಥ ದೇವರ ಮಹಿಮೆ ಅಪಾರ. ಮಹಾರಾಷ್ಟ್ರದ ಸೊಲ್ಲಾಪುರ ಆಗರ್ಭ ಶ್ರೀಮಂತ ಮನೆತನದ ದಂಪತಿಗೆ ಮದುವೆಯಾಗಿ 18 ವರ್ಷಗಳಾದರೂ ಮಕ್ಕಳಿರಲಿಲ್ಲ. ಸೀಮಿ ನಾಗೇಶ್ವರ ದೇವಸ್ಥಾನಕ್ಕೆ ಬಂದು ಸಂತಾನ ಪ್ರಾಪ್ತಿ ಯಾದರೆ, ನಿನ್ನ ಹೆಡೆ ಹಿಡಿದು ಎದೆಹಾಲು ಉಣಿಸುವೆನೆಂದು ಹೆಂಡತಿ ಹರಕೆ ಹೊತ್ತಳು. ಅವಳ ಭಕ್ತಿಗೆ ಮೆಚ್ಚಿದ ನಾಗ ನಾಥ ದೇವರು ವರ್ಷದಲ್ಲಿಯೇ ಗಂಡು ಮಗುವನ್ನು ಕರುಣಿಸಿದ.
ಹರಕೆ ಮುಟ್ಟಿಸಲು ದೇವಸ್ಥಾನ ಸನ್ನಿಧಿಗೆ ಬಂದಾಗ ಅವಳ ಭಕ್ತಿಗೆ ಮೆಚ್ಚಿ ಸತ್ವ ಪರೀಕ್ಷೆಗಾಗಿ ನಾಗನಾಥ ಸಾಕ್ಷಾತ್ ಪ್ರತ್ಯಕ್ಷನಾದ. ನಾಗನಾಥನನ್ನು ಕಂಡ ಮಹಾತಾಯಿ ಹರಕೆ ಮರೆತು ಭಯ ಭೀತಳಾಗಿ ತನ್ನ ಮಗುವನ್ನು ದೇವರ ಸನ್ನಿಧಿಯಲ್ಲಿ ಬಿಟ್ಟು ಓಡಿ ಹೋದಳು. ತಕ್ಷಣವೇ ನಾಗನಾಥ ಅದೃಶ್ಯನಾದ. ಆ ಕ್ಷಣವೇ ಮಗುವಿನ ಪ್ರಾಣ ಹಾರಿ ಹೋಯಿತು.
ಇಂತಹ ಅದ್ಭುತ ಪವಾಡಕ್ಕೆ ಸಾಕ್ಷಿಯಾಗಿ ಮಂದಿರದಲ್ಲಿ ಮಗುವಿನ ಸಮಾಧಿ ಕಾಣಬಹುದಾಗಿದೆ. ಅಂದಿನಿಂದ ಈ ದೇವಸ್ಥಾನವು ಸಂತಾನ ಸಿದ್ಧಿ ಪ್ರಸಿದ್ಧವಾಗಿದ್ದು, ಭಕ್ತರು ತಮ್ಮ ಇಷ್ಟಾರ್ಥ ಪೂರೈಸಿ ಕೊಳ್ಳುತ್ತಿದ್ದಾರೆ. ಪ್ರತಿ ಶನಿವಾರ ನಾಗ ದೋಷ ಮತ್ತು ಕಾಳ ಸರ್ಪ ದೋಷ ಪೂಜೆ ನೆರವೇರುತ್ತದೆ.
ಏಳು ಹೆಡೆ ನಾಗಪ್ಪ ದೇವಸ್ಥಾನ - ಬಳ್ಳಾರಿ
ವಿಜಯನಗರ ಅರಸರ ಕಾಲದಲ್ಲಿ ಸ್ಥಾಪನೆಯಾಗಿರುವ ಏಳು ಹೆಡೆ ನಾಗಪ್ಪ ದೇವಸ್ಥಾನ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕು ಬುಕ್ಕಸಾಗರ ಗ್ರಾಮದಲ್ಲಿದೆ. ಇದು ಪುರಾತನ ಪ್ರಸಿದ್ಧವಾಗಿದ್ದು, ದೋಷ ಪರಿಹಾರಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬಳ್ಳಾರಿ ಜರಗುವಂತೆ “ಸರ್ಪ ಸಂಸ್ಕಾರ' ಮತ್ತು “ಆಶ್ಲೇಷ ಬಲಿ' ಪೂಜಾ ಕಾರ್ಯಗಳು ನಡೆಯುತ್ತವೆ. ಈ ದೇವಸ್ಥಾನವಿರುವ ಬುಕ್ಕಸಾಗರ ಗ್ರಾಮದ ವಿಶ್ವವಿಖ್ಯಾತ ಹಂಪಿ ಸನಿಹದಲ್ಲೇ ಇದೆ.
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಈ ದೇವಸ್ಥಾನಕ್ಕೆ ಜಿಲ್ಲೆ ಸೇರಿ ರಾಜ್ಯ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಪೂಜೆ ನೆರವೇರಿಸುತ್ತಾರೆ. ಏಳು ಹೆಡೆ ನಾಗಪ್ಪನಿಗೆ ಪೂಜೆ ನೆರವೇರಿಸಿದರೇ ಸರ್ಪದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ನಾಗರಪಂಚಮಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಪ್ರತಿ ಸೋಮವಾರ ಮತ್ತು ಶನಿವಾರ ನೆರವೇರುತ್ತವೆಈ ದೇವಸ್ಥಾನಕ್ಕೆ ಆಗಮಿಸಲು ಹೊಸಪೇಟೆ, ಬಳ್ಳಾರಿ, ರಾಯಚೂರು, ಗಂಗಾವತಿಯಿಂದ ಬಸ್ ಸೌಲಭ್ಯ ವಿದೆ.
0 Comments
Comment is awaiting for approval