Ticker

6/recent/ticker-posts

ಡಾ. ಹಾ. ಮಾ. ನಾಯಕ

ಡಾ. ಹಾ. ಮಾ. ನಾಯಕರ ಪೂರ್ತಿ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ಹಾಮಾನಾ ಎಂಬುದು ಅವರ ಕಾವ್ಯನಾಮ. ಅವರ ಒಟ್ಟು ಬದುಕಿನ ಕಾಯಕದಲ್ಲಿ, ಸಿಂಹಪಾಲು ಕನ್ನಡದ ಕೈಂಕರ್ಯಕ್ಕೆ, ಪರಿಚಾರಿಕೆಗೆ ಮೀಸಲು. ‘ಕನ್ನಡ ನನ್ನ ಮೊದಲ ಪ್ರೀತಿ, ಎರಡನೆಯ ಪ್ರೀತಿಯೂ ಅದೇ’ ಎಂಬುದು ಅವರ ನಿಲುವು. ಅವರ ಬದುಕು ಕೂಡ ಅಂತಹುದೆ.

ವಿಶಾಲ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದ ಹಾರೋಗದ್ದೆ ನಾಯಕರ ಒಂದೇ ಮನೆಯ ಹಳ್ಳಿ; ಹುಟ್ಟಿದ್ದು 1931 ಫೆಬ್ರವರಿ 5. ತಾಯಿ-ತಂದೆ ಇಟ್ಟ ಹೆಸರು ಮಾನಪ್ಪ. ತಾಯಿ ರುಕ್ಮಿಣಿಯಮ್ಮ. ತಂದೆ ಶ್ರೀನಿವಾಸ ನಾಯಕ. ಅವರದು ರೈತಾಪಿ ಕುಟುಂಬ; ಪೂರ್ವದಿಂದಲೂ ವ್ಯವಸಾಯಗಾರರ ಮನೆತನ.

 

ವಿದ್ಯಾಭ್ಯಾಸ

ಪ್ರಾಥಮಿಕ ಓದು ಆಗುಂಬೆಯ ಹತ್ತಿರದ ನಾಲೂರಿನಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸ ಮೇಗರವಳ್ಳಿ, ಪ್ರೌಢಶಾಲೆ ಮುಗಿಸಿದ್ದು ತೀರ್ಥಹಳ್ಳಿ, ಇಂಟರ್ ಮೀಡಿಯಟ್ ಶಿವಮೊಗ್ಗ, ಬಿ.ಎ. ಆನರ್ಸ್ ಮೈಸೂರು ಮಹಾರಾಜ ಕಾಲೇಜು. ಕನ್ನಡ ಅಧ್ಯಾಪಕರಾಗಿ ತುಮಕೂರು, ಶಿವಮೊಗ್ಗಗಳಲ್ಲಿದ್ದು 1961ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸೇರಿದರು. ಮೈಸೂರು ವಿಶ್ವವಿದ್ಯಾಲಯದ ವ್ಯಾಸಂಗ ವೇತನ ಪಡೆದು ಕಲ್ಕತ್ತ ವಿಶ್ವವಿದ್ಯಾಲಯದ ಭಾಷಾವಿಜ್ಞಾನ ಎಂ.ಎ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದರು. ಅಲ್ಲಿಂದ ಮುಂದೆ ಫುಲ್ ಬ್ರೈಟ್ ವಿದ್ಯಾರ್ಥಿವೇತನ ದೊರೆತು ಅಮೆರಿಕೆಯ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ‘ಕನ್ನಡ: ಸಾಹಿತ್ಯಕ ಆಡುಭಾಷೆ’ ಎಂಬ ನಿಬಂಧ ಸಾದರಪಡಿಸಿ ಡಾಕ್ಟರೇಟ್ ಪಡೆದರು.

ಅಮೆರಿಕದಿಂದ ಹಿಂತಿರುಗಿದ ಮೇಲೆ ಮೈಸೂರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ, ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾದರು. ಅಧ್ಯಾಪಕರಾಗಿ ವಿದ್ಯಾರ್ಥಿಗಳ ಗೌರವ ಗಳಿಸಿದ್ದು ಚಾರಿತ್ರ್ಯಶುದ್ಧಿ, ಪಾಠ ತಪ್ಪದ ಶಿಸ್ತು ಮತ್ತು ಅನುಕಂಪ ಶೀಲವಾದ ಆರ್ದ್ರ ಅಂತಃಕರಣದಿಂದ. ಅನಾಯಾಸವಾದ ಅಭಿವ್ಯಕ್ತಿ ಕೌಶಲ ಮತ್ತು ವಾಗ್ಮಿತೆ ಅವರಿಗಿದ್ದ ದೊಡ್ಡ ಶಕ್ತಿ. ಜತೆಗೆ ಸ್ಮರಣಶಕ್ತಿಯ ವರ. ಇದರಿಂದ ಅಧ್ಯಯನ-ಅಧ್ಯಾಪನ ಎರಡೂ ಯಶಸ್ವಿಯಾದವು.

ದೇಜಗೌ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿ ನೇಮಕವಾದದ್ದರಿಂದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೆರವಾದ ಅವರ ಸ್ಥಾನ ತುಂಬಿ ನಾಯಕರು ನಿರ್ದೇಶಕರಾದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಮಾನಸಗಂಗೋತ್ರಿಗೆ ಮುಡಿಯ ಮಾಣಿಕ್ಯ ಕನ್ನಡ ಅಧ್ಯಯನ ಸಂಸ್ಥೆ. ಅದರ ನಿರ್ದೇಶಕರಾಗಿ ನಾಯಕರು ಇದ್ದ ಹದಿನಾರು ವರ್ಷ ಸುವರ್ಣಯುಗ. ಸಂಸ್ಥೆ ನಾಡಿನಲ್ಲೊಂದು ಪ್ರತಿಷ್ಟಿತ ಕಾರ್ಯಸೌಧವಾಗಿ ರೂಪಿತವಾಯಿತು.

ನಾಯಕರ ನೇತೃತ್ವವಿದ್ದ ಸುದೀರ್ಘ ಅವಧಿಯಲ್ಲಿ ಅಧ್ಯಯನ ಸಂಸ್ಥೆ ಹಲವು ಮೊಗವಾಗಿ ಮೈಚಾಚಿತು. ನೂರಾರು ಪ್ರಕಟಣೆಗಳು, ವಿಚಾರ ಸಂಕಿರಣಗಳು, ಸಮ್ಮೇಳನದ ಗೋಷ್ಠಿಗಳು, ಹತ್ತಾರು ಉಪವಿಭಾಗಗಳು, ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಅಚ್ಚುಕಟ್ಟಾದ ಕಾರ್ಯಕ್ರಮಗಳು – ಹೀಗೆ ನಿತ್ಯೋತ್ಸವ.


ಕನ್ನಡದ ಪ್ರತಿಭೆಗಳು ಪುಟಿಯಲು ಹೊಸ ಹೆದ್ದಾರಿಗಳು ತೆರೆದುವು. ಕನ್ನಡ ಸಾಹಿತ್ಯಪ್ರಿಯರಿಗೆ ಹುಲುಸು ಬೆಳೆಯ ಸುಗ್ಗಿ; ಮಾರುಕಟ್ಟೆಯಲ್ಲಿ ದುರ್ಲಭವಾದ ಅಪರೂಪದ ಆಕರ ಗ್ರಂಥಗಳ ಪರಿಷ್ಕೃತ ಪುನರ್ ಮುದ್ರಣಗಳು; ಎಪಿಗ್ರಾಫಿಯ ಕರ್ನಾಟಿಕ, ಕನ್ನಡ ವಿಶ್ವಕೋಶ, ಕನ್ನಡ ಸಾಹಿತ್ಯ ಚರಿತ್ರೆ ಮುಂತಾದ ಮೌಲಿಕ ಸಂಪುಟಗಳು. ನಾಯಕರು ಸ್ವಯಂ ಜಾನಪದ ವಿದ್ವಾಂಸರು, ಅದು ಅವರ ಅಂತರಂಗಕ್ಕೆ ಹತ್ತಿರವಾದ ಪ್ರಕಾರ, ಫಲವಾಗಿ ಜಾನಪದ ವಸ್ತುಸಂಗ್ರಹಾಲಯ ಮೈಪಡೆಯಿತು.

ನಾಯಕರು ಮೂವತ್ತು ವರ್ಷಗಳ ನಿರಂತರ ಶ್ರದ್ಧೆಯ ಸೇವೆಗೆ ಸಂದ ಪುರಸ್ಕಾರವೆಂಬಂತೆ 1984ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕವಾದರು ಮತ್ತು ತಮ್ಮ ಸೇವಾ ಅವಧಿ ಇನ್ನೂ ಎಂಟು ತಿಂಗಳು ಇರುವಂತೆಯೇ, ತಾತ್ವಿಕ ಕಾರಣಗಳಿಗಾಗಿ, ಕುಲಪತಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು 1987ರಲ್ಲಿ ಮತ್ತೆ ಕನ್ನಡ ಅಧ್ಯಯನ ಸಂಸ್ಥೆಗೆ ಪ್ರಾಧ್ಯಾಪಕರಾಗಿ ಮರಳಿ ಎಂದಿನ ಬೋಧನೆಗೆ, ಓದಿಗೆ ಹಾಜರಾದರು; ಇದು ಅವರ ಅಂಜದ ಅಳುಕದ ನೇರ ನಿರ್ಭೀತ ಚೈತನ್ಯಶಾಲಿ ವ್ಯಕ್ತಿತ್ವದ, ಉನ್ನತಾದರ್ಶಧ್ಯೇಯದ ಸ್ವಭಾವ.

 

ಸಾಧನೆ

ಅವರ ಸಾಧನೆಗಳು ಹಲವಾರು. ಅವುಗಳಲ್ಲಿ ಮುಖ್ಯವಾದುದನ್ನು ಉಲ್ಲೇಖಿಸುವುದಾದರೆ ಅವರು ಬೀದರಿನಲ್ಲಿ ನಡೆದ ಅಖಿಲ ಭಾರತ 57ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಲ್ಲದೆ ಹತ್ತಾರು ಉನ್ನತ ಸಮಿತಿಗಳಲ್ಲಿ ಸದಸ್ಯರಾಗಿ ಇಲ್ಲವೇ ಸಂಚಾಲಕರಾಗಿ ಕೆಲಸಮಾಡಿದ್ದರು. ಅಮೇರಿಕಾ ದೇಶದ ಪೆನ್ಸಿಲ್ ವೇನಿಯ ವಿಶ್ವವಿದ್ಯಾಲಯದಲ್ಲಿ ಗೌರವಾನ್ವಿತ ಸಂದರ್ಶಕ ವಿದ್ವಾಂಸರಾಗಿದ್ದರು. ರುಮಾನಿಯಾ ದೇಶದ ಬುಖಾರೆಸ್ಟ್ ನಲ್ಲಿ ನಡೆದ ಹತ್ತನೆಯ ಅಂತರ ರಾಷ್ಟ್ರೀಯ ಭಾಷಾ ವಿಜ್ಞಾನಿಗಳ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಹದಿನಾರು ವರ್ಷಗಳ ಕಾಲ ಮೈಸೂರು ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. ೧೯೮೪ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.
ಸಣ್ಣ ಕಥೆ, ಪ್ರಬಂಧ, ವಿಮರ್ಶೆ, ವ್ಯಕ್ತಿಚಿತ್ರಗಳು,ಜಾನಪದ, ಅನುವಾದ, ಅಂಕಣ ಬರಹಗಳನ್ನು ರಚಿಸಿದ್ದಾರೆ.೧೯೮೫ರಲ್ಲಿ ಬೀದರ್ ನಲ್ಲಿ ನಡೆದ ಐವತ್ತೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರಾಗಿದ್ದರು. ೧೯೮೨ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಹಾಮಾನಾಯಕರ ಸಂಪ್ರತಿ ಎಂಬ ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ೧೯೮೯ರಲ್ಲಿ ಪ್ರಶಸ್ತಿ ದೊರೆತಿದೆ.ಇದು ಕನ್ನಡದಲ್ಲಿ ಅಂಕಣ ಬರಹಗಳಿಗೆ ಸಂದ ಮೊಟ್ಟ ಮೊದಲನೆಯ ಗೌರವ.

ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಐಬಿಎಚ್ ಶಿಕ್ಷಣದತ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯ ಸುವರ್ಣ ಮಹೋತ್ಸವ ಬಹುಮಾನ, ‘ಸಂಪ್ರತಿ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಗೌರವ, ಪ್ರಶಸ್ತಿಗಳಿಗೆ ಅವರು ಪಾತ್ರರಾದರು.

ಕೃತಿಗಳು

  • ಬಾಳ್ನೋಟಗಳು
  • ಕನ್ನಡ ಸಾಹಿತ್ಯ ಚರಿತ್ರೆ (೫ ಸಂಪುಟಗಳು)
  • ಸಂಪ್ರತಿ (ಅಂಕಣ ಬರಹಗಳು)
  • ಸಂಚಯ(ಅಂಕಣ ಬರಹಗಳು)
  • ಸಂಪದ(ಅಂಕಣ ಬರಹಗಳು)
  • ಸೂಲಂಗಿ(ಅಂಕಣ ಬರಹಗಳು)
  • ಸಂಪುಟ(ಅಂಕಣ ಬರಹಗಳು)
  • ನಮ್ಮ ಮನೆಯ ದೀಪ (ಪ್ರಬಂಧಗಳು)
  • ಹಾವು ಮತ್ತು ಹೆಣ್ಣು (ಕತೆಗಳು)
  • ವಿನಾಯಕ ವಾಙ್ಮಯ
  • ದೇಜಗೌ ಮತ್ತು ವ್ಯಕ್ತಿ ಸಾಹಿತ್ಯ
  • ಇಂಡಿಯಾ ದೇಶದ ಸಾರ್ವಜನಿಕ ಆಯವ್ಯಯ
  • ಗೊರೂರು ಗೌರವ ಗ್ರಂಥ
  • ಅಕ್ಕ ಮಹಾದೇವಿ
  • ಬಸವ ಪುರುಷ
  • ಚಿನ್ನದ ಗರಿ
  • ಎ.ಆರ್.ಕೃ.ಜೀವನ ಸಾಧನೆ
  • ಮುದ್ದಣ
  • ರವೀಂದ್ರನಾಥ ಠಾಕೋರ್
  • ಜಾನಪದ ಗ್ರಂಥಸೂಚಿ
  • ಬಿಡುಗಡೆಯ ಬಳ್ಳಿ
  • ಕಾವ್ಯ ಸಂಚಯ
  • ವಿಜ್ಞಾನ ಸಾಹಿತ್ಯ ನಿರ್ಮಾಣ
  • ಗದ್ಯ ವಿಹಾರ (೧ ಮತ್ತು ೨)

ನಾಯಕರು ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ಲೇಖಣಿ ಹಿಡಿದರು. ಮೇಗರವಳ್ಳಿ ಮಾಧ್ಯಮಿಕ ಶಾಲೆಯಲ್ಲಿ ಇರುವಾಗ ‘ಮಕ್ಕಳ ಪುಸ್ತಕ’ವೆಂಬ ಪತ್ರಿಕೆಗೆ ಬರೆದಿದ್ದರು. ಪ್ರೌಢಶಾಲೆಯಲ್ಲಿ ಕೈಬರಹ ಪತ್ರಿಕೆಯ ಖಾಯಂ ಲೇಖಕರಾದರು. ಎಸ್.ಎಸ್. ಎಲ್.ಸಿ ತರಗತಿಯಲ್ಲಿರುವಾಗ ಅವರ ಚೊಚ್ಚಲ ಕೃತಿ ‘ಬಾಳ್ನೋಟಗಳು’ ಹೊರಬಂದು ಮೆಚ್ಚುಗೆ ದಾಖಲೆ ಸ್ಥಾಪಿಸಿತು. ನಂತರದಲ್ಲಿ ಅವರ ಬರವಣಿಗೆ ಸುಮಾರು ಐದು ದಶಕಗಳಕಾಲ ನಿರಂತರವಾಗಿ ಹರಿಯಿತು.

ಬುದ್ಧಿ ಅರಳುತ್ತಿದ್ದ ಬಾಲ್ಯದ ದಿನಗಳಲ್ಲಿಯೇ ಅವರಿಗೆ ಕುವೆಂಪು ಮೊದಲಾದ ಸಾಹಿತ್ಯದೈತ್ಯರ ಗಾಢ ಪ್ರಭಾವವಾಗಿತ್ತು. ಅಂಥವರ ಸತ್ಸಂಗವನ್ನು ಜೀರ್ಣಿಸಿಕೊಳ್ಳುತ್ತ ಓದಾಳಿ ವಾಚಾಳಿ ಪುಸ್ತಕಜೀವಿಯಾಗಿ ಬೆಳೆದರು. ಅವರ ಶೋಧನೆಯೆಂದರೆ ಅದು ಪುಸ್ತಕ ಶೋಧನೆ, ಪುಸ್ತಕ ನೆಲೆಗಳು ಇರುವಲ್ಲಿಗೆ ತೀರ್ಥಯಾತ್ರೆ. ಅವರ ಮನೆಯೂ ಅಷ್ಟೇ, ಅದೊಂದು ಪುಸ್ತಕ ಕಾಶಿ. ಅವರ ಮುಂದೆ ಪುಸ್ತಕದ್ದೇ ರಾಶಿ.

ನಿಧನ

ಹಾಮಾನಾ ಅವರು ಹೃದಯಾಘಾತದಿಂದ ೨೦೦೦ನೆಯ ಇಸವಿ, ನವೆಂಬರ್ ೧೧ರಂದು ಮೈಸೂರಿನಲ್ಲಿ ನಿಧನಹೊಂದಿದರು. ೨೦೦೪ರಲ್ಲಿ ಹಾಮಾನಾ ಪತ್ನಿ ಯಶೋದಮ್ಮ ಅವರು , ಬೆಂಕಿ ಹಚ್ಹಿಕೊಂಡು, ಆತ್ಮಹತ್ಯೆ ಮಾಡಿಕೊಂಡರೆಂದು ವರದಿಯಾಗಿತ್ತು.

                                                                                           ಕೃಪೆ : ಅಂತರ್ಜಾಲ
 

Post a Comment

1 Comments

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete

Comment is awaiting for approval