ಸೆಪ್ಟೆಂಬರ್ 2 - ಭಾರತ್ ಬಂದ್ : ಕೇಂದ್ರ ಸರ್ಕಾರದ ರಸ್ತೆ ಸುರಕ್ಷತಾ ಕಾಯ್ದೆಯನ್ನು ವಿರೋಧಿಸಿ, ಜೊತೆಗೆ ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಸೆಪ್ಟೆಂಬರ್ 2 ರಂದು 'ಭಾರತ್ ಬಂದ್' ಗೆ ಕರೆ ನೀಡಿವೆ.
ಈ ಬಂದ್‌ಗೆ ರಾಜ್ಯದ ಬಹುತೇಕ ಎಲ್ಲ ಕಾರ್ಮಿಕ, ಕೆಲವು ವಿದ್ಯಾರ್ಥಿ, ಜನಪರ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿವೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ಸೆ.2 ರಂದು ಕರ್ನಾಟಕದಲ್ಲೂ ಬಂದ್ ನಡೆಯಲಿದ್ದು, ಸರ್ಕಾರಿ ಬಸ್ ಸಂಚಾರ, ಖಾಸಗಿ ವಾಹನಗಳ ಓಡಾಟ ಇರುವುದಿಲ್ಲ. ವರ್ತಕರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದರಿಂದ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳಲಿದೆ. ಸಂಚಾರ ವ್ಯವಸ್ಥೆ ಸ್ಥಗಿತಗೊಳ್ಳಲಿರುವುದರಿಂದ ಸರ್ಕಾರಿ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಕಂಪನಿಗಳ ನೌಕರರಿಗೂ ತೊಂದರೆಗಳಾಗುವ ಸಾಧ್ಯತೆಯಿದೆ.
ಒಂದು ದಿನದ ಬಂದ್ ಕರೆಗೆ ರಾಜ್ಯದ ಎಲ್ಲ ಕಾರ್ಮಿಕ ಸಂಘಟನೆಗಳು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಸಂಘ, ಬ್ಯಾಂಕ್ ನೌಕರರ ಸಂಘಟನೆಗಳು, ವಿಮಾ ಕಂಪನಿಗಳ ನೌಕರರ ಸಂಘಟನೆಗಳು, ಲಾರಿ ಮಾಲಿಕರ ಸಂಘ, ಆಟೋ ಚಾಲಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಕೆಲವು ವಿದ್ಯಾರ್ಥಿ ಸಂಘಟನೆಗಳು, ಹಲವು ಜನಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ ಎಂದು ಸಿಐಟಿಯು ಮುಖಂಡ ಕೆ.ಎನ್. ಉಮೇಶ್ 'ಉದಯವಾಣಿ' ಪತ್ರಿಕೆಗೆ ತಿಳಿಸಿದ್ದಾರೆ.
0 Comments
Comment is awaiting for approval