ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶೇ 100ರಷ್ಟು ಜೈವಿಕ ಇಂಧನದಿಂದ ಸಂಚಾರ
ನಡೆಸುವ ದೇಶದ ಪ್ರಥಮ ಬಸ್ [India's first Bio Bus] ಸಂಚಾರಕ್ಕೆ ಚಾಲನೆ ನೀಡಿದೆ. ಬೆಂಗಳೂರು-ಚೆನ್ನೈ ನಡುವೆ
ಪ್ರಾಯೋಗಿಕವಾಗಿ ಈ ಬಸ್ ಸಂಚಾರ ನಡೆಸಲಿದೆ.
ಸೋಮವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ನಟಿ ಹರ್ಷಿಕಾ ಪೂಣಚ್ಛ ಅವರು ಜೈವಿಕ
ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಐರಾವತ ಮಲ್ಟಿ ಆಕ್ಸೆಲ್ ಬಸ್ ಬೆಂಗಳೂರು-ಚೆನ್ನೈ
ಮಾರ್ಗದಲ್ಲಿ ಸಂಚಾರ ನಡೆಸಲಿದ್ದು, ಸಂಪೂರ್ಣವಾಗಿ ಜೈವಿಕ ಇಂಧನವನ್ನು ಇದಕ್ಕೆ
ಬಳಸಲಾಗುತ್ತಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, 'ಪ್ರಾಯೋಗಿಕವಾಗಿ ಒಂದು
ಬಸ್ಸಿಗೆ ಶೇ 100 ರಷ್ಟು ಜೈವಿಕ ಇಂಧನ ಬಳಸಿ ಕಾರ್ಯಾಚರಣೆಗೆ ಇಳಿಸಲಾಗಿದೆ. ಹಿಂದೆ ಶೇ
20ರಷ್ಟು ಜೈವಿಕ ಇಂಧನ ಬಳಸಿ 10 ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡಲಾಗಿತ್ತು' ಎಂದರು.
'ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ 1,700 ಬಸ್ಸುಗಳಿಗೆ ಶೇ 20ರಷ್ಟು ಬಯೋ
ಡೀಸೆಲ್ ಬಳಸಲು ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಈ ಬಸ್ಸುಗಳು ಸಂಚಾರ ಆರಂಭಿಸಲಿವೆ.
ಜೈವಿಕ ಇಂಧನ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ಡೀಸೆಲ್‌ಗಿಂತ 5 ರೂ.
ಕಡಿಮೆ ದರದಲ್ಲಿ ಇಂಧನ ಲಭ್ಯವಾಗುತ್ತದೆ' ಎಂದರು.
'ಜೈವಿಕ ಇಂಧನವನ್ನು ವಿದೇಶದಿಂದ ಅಮದು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಕೊಳೆತ
ಆಹಾರ, ಕೊಬ್ಬು, ಖಾದ್ಯ ತೈಲಗಳನ್ನು ನಾನಾ ಪ್ರಕ್ರಿಯೆಗಳ ಮೂಲಕ ಜೈವಿಕ ಇಂಧನ
ತಯಾರಿಸಲಾಗುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಇಲ್ಲ' ಎಂದು ಕೆಎಸ್ಆರ್‌ಟಿಸಿ
ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ ಹೇಳಿದರು.
0 Comments
Comment is awaiting for approval