Ticker

6/recent/ticker-posts

ಬೆಂಗಳೂರು ಪುಸ್ತಕೋತ್ಸವ 2015 [Bangalore Book Festival 2015]

ಬೆಂಗಳೂರು ಪುಸ್ತಕೋತ್ಸವ 2015 [Bangalore Book Festival 2015] : ಈ ಸಾಲಿನ ಬೆಂಗಳೂರು ಪುಸ್ತಕೋತ್ಸವ ಇಂದಿನಿಂದ [ಅಕ್ಟೋಬರ್‌ 19]  ಅಕ್ಟೋಬರ್‌ 25 ರವರೆಗೆ ಅರಮನೆ ಮೈದಾನದಲ್ಲಿ  ನಡೆಯಲಿದೆ. ಏಳು ದಿನ ನಡೆಯುವ ಈ ಪುಸ್ತಕೋತ್ಸವದಲ್ಲಿ ಪುಸ್ತಕಪ್ರೇಮಿಗಳಿಗೆ ವಿವಿಧ ಭಾಷೆಯ, ವಿವಿಧ ವಿಷಯಗಳ, ವಿವಿಧ ಲೇಖಕರ ಹಲವಾರು ಪುಸ್ತಕಗಳನ್ನು ಒಂದೇ ಕಡೆ ನೋಡುವ, ಕೊಳ್ಳುವ ಅವಕಾಶ ಬೆಂಗಳೂರು ಪುಸ್ತಕೋತ್ಸವದಲ್ಲಿ ದೊರೆಯಲಿದೆ. ಇದರ  ಜೊತೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಏರ್ಪಡಿಸಲಾಗಿದೆ. 

ಕಳೆದ ಬಾರಿಯ ಬೆಂಗಳೂರು ಪುಸ್ತಕೋತ್ಸವ 2014 [Bangalore Book Festival 2014] ಜೆ.ಪಿ ನಗರದ, ಪುಟ್ಟೇನಹಳ್ಳಿ , ಎಲಾನ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದಿತ್ತು. ನಾನು ಅಲ್ಲಿ ಹಲವು ಪುಸ್ತಕ ಮಳಿಗೆಗಳ ಮಾಲಿಕರೊಂದಿಗೆ ಮಾತನಾಡಿದಾಗ, ಪುಸ್ತಕೋತ್ಸವಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ ವೆಂಬುದು ತಿಳಿಯಿತು. ಅದಕ್ಕೆ ಮುಖ್ಯ ಕಾರಣ ಪುಸ್ತಕೋತ್ಸವ ನಡೆಯುವ ಸ್ತಳವನ್ನು ಬದಲಾಯಿಸಿದ್ದು. ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಪುಸ್ತಕೋತ್ಸವವನ್ನು ಬೇರೆಡೆಗೆ ಸ್ಥಳಾಂತರಿಸಿದ್ದು ಪುಸ್ತಕ ಪ್ರೇಮಿಗಳಲ್ಲಿ ನಿರುತ್ಸಾಹ ಮೂಡಿಸಿದ್ದರಿಂದ ಪುಸ್ತಕ ವಹಿವಾಟಿನ ಮೇಲೇ ವ್ಯತಿರಿಕ್ತ ಪರಿಣಾಮ ಬೀರಿತ್ತು. 

ಆ ಸಮಯದಲ್ಲಿ ನಡೆಯುತ್ತಿದ್ದ ಕೇಕ್ ಎಕ್ಷಿಬಿಶಿನ್ ಗೆ ದೊರೆತ ಪ್ರತಿಕ್ರಿಯೆ ಬೆಂಗಳೂರು ಪುಸ್ತಕೋತ್ಸವ 2014ಕ್ಕೆ ಸಿಗದೇ ಹೋದದ್ದು  ವಿಷಾದ. ಅದಕ್ಕೆ ಕಾರಣಗಳು ಹಲವು. 2012ರಲ್ಲಿ ಅರಮನೆ ಮೈದಾನದಲ್ಲಿ ನಡೆದ ಪುಸ್ತಕೋತ್ಸವದಲ್ಲಿ ₹10ಕೋಟಿ ವಹಿವಾಟು ನಡೆದಿದ್ದರೆ, 2014ನೇ ವರ್ಷದಲ್ಲಿ ಪುಸ್ತಕ ಮಾರಾಟದಲ್ಲಿ ತೀವ್ರ ಕುಸಿತ ಕಂಡಿತ್ತು. ಜಾಗ ಬದಲಾವಣೆಯೇ ಇದಕ್ಕೆ ಮುಖ್ಯ ಕಾರಣ.

ಅಂದಾಜು 10ರಿಂದ 20 ಲಕ್ಷದಷ್ಟು ಪುಸ್ತಕಗಳು ಪ್ರದರ್ಶನಗೊಳ್ಳುವ ಬೆಂಗಳೂರು ಪುಸ್ತಕೋತ್ಸವದ ಮೆರುಗು ಕಳೆದ ಎರಡು ವರ್ಷಗಳಿಂದ ಕಳೆಗುಂದಿತ್ತು.  ಬೆಂಗಳೂರು ಪುಸ್ತಕೋತ್ಸವ 2013 ಏರ್ಪಾಡಾಗಿ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು . ಅದು ನನ್ನಲ್ಲಿ ಬಾರಿ ನಿರಾಸೆಯನ್ನು ಮೂಡಿಸಿತ್ತು.

ಈ ಬಾರಿಯ  ಬೆಂಗಳೂರು ಪುಸ್ತಕೋತ್ಸವ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯಲಿರುವುದರಿಂದ ಪುಸ್ತಕೋತ್ಸವದ ಹಳೆಯ ವೈಭವ  ಮರುಕಳಿಸಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಮೂಡಿದೆ. ದೊಡ್ಡ ಜಾಗದಲ್ಲಿ ದೊಡ್ಡ ಮಟ್ಟದಲ್ಲಿ ಪುಸ್ತಕೋತ್ಸವ ನಡೆಯುತ್ತಿರುವುದು ಪುಸ್ತಕಪ್ರೇಮಿಗಳಲ್ಲಿ, ಪ್ರಕಾಶಕರಲ್ಲಿ, ಪುಸ್ತಕ ಮಾರಾಟಗಾರರ ಮೊಗದಲ್ಲಿ ನಗು ಮೂಡಿಸಿದೆ.

ಬೆಂಗಳೂರು ಪುಸ್ತಕೋತ್ಸವದ ನಿರ್ದೇಶಕ ಹಾಗೂ ಇಂಡಿಯಾ ಕಾಮಿಕ್ಸ್‌ನ  ಬಿ.ಎಸ್.ರಘುರಾಂ ಪುಸ್ತಕೋತ್ಸವದ ಬಗ್ಗೆ ನೀಡಿರುವ ಮಾಹಿತಿ : ಈ ಬಾರಿಯ ಕನ್ನಡ ಪ್ರಕಾಶಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬಾರಿ ಅವರಿಗೆ ಶೇ 50 ಸಬ್ಸಿಡಿ ನೀಡಿದ್ದೇವೆ. ಅಂದರೆ, ಏಳು ದಿನ ನಡೆಯುವ ಪುಸ್ತಕೋತ್ಸವದಲ್ಲಿ ಭಾಗವಹಿಸುವ ಒಂದು ಮಳಿಗೆಯಿಂದ ₹10 ಸಾವಿರ ಮಾತ್ರ ಬಾಡಿಗೆ ಸಂಗ್ರಹಿಸಿದ್ದೇವೆ. ಇಂಗ್ಲಿಷ್‌ ಪ್ರಕಾಶಕರಿಗೆ ₹25 ಸಾವಿರ ಹಾಗೂ ಇತರೆ ಪ್ರಾದೇಶಿಕ ಭಾಷೆಯ ಮಳಿಗೆಗಳಿಗೆ ₹16 ಸಾವಿರ ಬಾಡಿಗೆ ನಿಗದಿ ಪಡಿಸಿದ್ದೇವೆ.

ಈ ಬಾರಿಯ ಉತ್ಸವದಲ್ಲಿ 40 ಕನ್ನಡ ಮಳಿಗೆಗೆಳು, 150 ಇಂಗ್ಲಿಷ್‌ ಮಳಿಗೆಗಳು (ಪುಸ್ತಕ ಮಾರಾಟ ಮಳಿಗೆಯ ಜೊತೆಗೆ ಇ–ಬುಕ್‌, ಇ–ಕಾಮರ್ಸ್‌, ಸ್ಟೇಷನರಿ ಮಳಿಗೆಗಳೂ ಸೇರಿ) ಮತ್ತು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ 30 ಮಳಿಗೆಗಳು ಇರಲಿವೆ.  ಎಂದು ಬಿ.ಎಸ್.ರಘುರಾಂ ತಿಳಿಸಿದ್ದಾರೆ

ಈ ಉತ್ಸವದಲ್ಲಿ  ಕೇವಲ ಪುಸ್ತಕಗಳ ಪ್ರದರ್ಶನ, ಮಾರಾಟವಷ್ಟೇ ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳು, ಛಾಯಾಚಿತ್ರ, ವ್ಯಂಗ್ಯಚಿತ್ರ ಪ್ರದರ್ಶನಗಳೂ ನಡೆಯಲಿವೆ’ ಎನ್ನುತ್ತಾರೆ ಬೆಂಗಳೂರು ಬುಕ್ಸ್ ಆಂಡ್ ಪಬ್ಲಿಷರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ನಿತಿನ್ ಷಾ.

ಈ ಬಾರಿಯ ಪುಸ್ತಕೋತ್ಸವಕ್ಕೆ ಅಂದಾಜು ಒಂದು ಲಕ್ಷ ಜನರು ಬರುವ ನಿರೀಕ್ಷೆ ಇದೆ ಎನ್ನುವ ಆಯೋಜಕರು ಪುಸ್ತಕಪ್ರಿಯರ ಅನುಕೂಲಕ್ಕಾಗಿ ಅರಮನೆ ಮೈದಾನದಲ್ಲಿ ಒಂದು ಎಟಿಎಂ ಮಷಿನ್‌ ಇರಿಸುವ ವ್ಯವಸ್ಥೆಯನ್ನೂ ಮಾಡಿದ್ದಾರೆ. ಪುಸ್ತಕೋತ್ಸವದೊಂದಿಗೆ ಎಸ್‌ಬಿಐ  ಕೈಜೋಡಿಸಿದ್ದು, ಎಲ್ಲ ಮಳಿಗೆಗಳಲ್ಲೂ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ಗಳನ್ನು ಬಳಸುವ ಅವಕಾಶ ಕಲ್ಪಿಸಿದೆ. ಸಂಜೆಯ ಮನರಂಜನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಸಿವು ನೀಗಿಸಿಕೊಳ್ಳಲು ಫುಡ್‌ಕೋರ್ಟ್‌ಗಳು ಇರುತ್ತವೆ. ಪ್ರವೇಶ ದರ ಒಬ್ಬರಿಗೆ ₹20.

ಉದ್ಘಾಟನಾ ಕಾರ್ಯಕ್ರಮದ ವಿವರಗಳು

ಉದ್ಘಾಟನೆ           –  ಕಿಮ್ಮನೆ ರತ್ನಾಕರ್‌. 
ಅಧ್ಯಕ್ಷತೆ               –  ಚಂದ್ರಶೇಖರ ಕಂಬಾರ. 
ಮುಖ್ಯ ಅತಿಥಿಗಳು  –  ರಾಮಚಂದ್ರ ಗುಹ ಮತ್ತು ಅನಿತಾ ನಾಯರ್‌. ರಜನಿ ಮಿಶ್ರ. 
ಉಪಸ್ಥಿತಿ              –  ಎಸ್‌.ಸಿ. ಸೇಠಿ. ನಿತಿನ್‌ ಷಾ. 

ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ. ಮೇಖ್ರಿ ಸರ್ಕಲ್‌ ಹತ್ತಿರ. ರಮಣ ಮಹರ್ಷಿ ರಸ್ತೆ. ಸಂಜೆ 5.

Post a Comment

0 Comments