ಕಳೆದ 2003ರಲ್ಲಿ ಬ್ರಿಟಷ್ ವಿಜ್ಞಾನಿಗಳು
ಮಂಗಳನಲ್ಲಿಗೆ ಹಾರಿಸಿದ್ದ ಬಾಹ್ಯಾಕಾಶ ನೌಕೆಯೊಂದು 11 ವರ್ಷಗಳ ನಂತರ ಪತ್ತೆಯಾಗಿರುವ
ಅಪರೂಪದ ಘಟನೆಯಿದು.
ಅನ್ಯಗ್ರಹ ಜೀವಿಗಳ ಅನ್ವೇಷಣೆಗೆಂದು ಬ್ರಿಟಿಷ್ ವಿಜ್ಞಾನಿಗಳು
‘ಬೀಗಲ್-2’ ಎಂಬ ಹೆಸರಿನ ಬಾಹ್ಯಾಕಾಶ ನೌಕೆಯೊಂದನ್ನು ಉಡಾವಣೆ ಮಾಡಿದ್ದರು. ಯುರೋಪಿಯನ್
ಸ್ಪೇಸ್ ಏಜೆನ್ಸಿಯ ‘ಮಾರ್ಸ್ ಎಕ್ಸ್ ಪ್ರೆಸ್’ ಕಾರ್ಯಾಚರಣೆಯ ಅಂಗವಾಗಿದ್ದ ಬೀಗಲ್-2
ಬಾಹ್ಯಾಕಾಶ ನೌಕೆ 2003ರ ಕ್ರಿಸ್ಮಸ್ ದಿನ ಮಂಗಳನ ಅಂಗಳದಲ್ಲಿ ಇಳಿಯಬೇಕಾಗಿತ್ತು. 2003ರ
ಡಿಸೆಂಬರ್ 19ರಂದು ನೌಕೆ ನಾಪತ್ತೆಯಾಗಿತ್ತು. ತದನಂತರ ಬಾಹ್ಯಾಕಾಶ ನೌಕೆಯ ಕುರಿತಂತೆ
ಯಾವುದೇ ಮಾಹಿತಿ ಲಭಿಸಿರಲಿಲ್ಲ.
ಲಂಡನ್‌ನ ರಾಯಲ್ ಸೊಸೈಟಿಯ ವೈಜ್ಞಾನಿಕ ಸಂಸ್ಥೆಯಲ್ಲಿ
ಶುಕ್ರವಾರ ಒಂದು ಕಿಕ್ಕಿರಿದ ಪತ್ರಿಕಾಗೋಷ್ಠಿ. ಇದರಲ್ಲಿ ಪ್ರಕಟನೆಯೊಂದು ಹೊರಬಿತ್ತು.
ಕೆಂಪು ಗ್ರಹ ಮಂಗಳನ ಮೇಲ್ಮೆಯಲ್ಲಿ ಮಾರ್ಸ್ ಲ್ಯಾಂಡರ್ ಪತ್ತೆಯಾಗಿದೆ ಎಂದು ಬಾಹ್ಯಾಕಾಶ
ತಜ್ಞರು ಈ ಸಂದರ್ಭದಲ್ಲಿ ಪ್ರಕಟಿಸಿದರು.
‘ಬೀಗಲ್-2 ಕಳೆದು ಹೋಗಿಲ್ಲ’ ಎಂದು ಬ್ರಿಟನ್‌ನ ಬಾಹ್ಯಾಕಾಶ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಕಾರಿ ಡೇವಿಡ್ ಪಾರ್ಕರ್ ಹೇಳಿದರು.
2003ರ
ಡಿಸೆಂಬರ್ 25ರಂದು ಬಾಹ್ಯಾಕಾಶ ನೌಕೆ ಮಂಗಳ ಗ್ರಹದಲ್ಲಿ ಇಳಿಯಬೇಕಾಗಿತ್ತು. ಬಾಹ್ಯಾಕಾಶ
ನೌಕೆ ಅಂದೇ ಯಶಸ್ವಿಯಾಗಿ ಇಳಿದಿರುವ ಕುರಿತಂತೆ ವಿಜ್ಞಾನಿಗಳ ಬಳಿ ‘ಅತ್ಯುತ್ತಮ
ಸಾಕ್ಷಾಧಾರ’ಗಳಿವೆ. ಬಾಹ್ಯಾಕಾಶ ನೌಕೆಯು ಭಾಗಶಃ ನಿಯೋಜನೆಗೊಂಡಿದೆ ಎಂದು ಅವರು
ತಿಳಿಸಿದರು.
‘ಬೀಗಲ್-2 ಬಾಹ್ಯಾಕಾಶ ನೌಕೆಯ ಪ್ರವೇಶ, ತಗ್ಗುವಿಕೆ ಮತ್ತು ಇಳಿಕೆಯ
ಕ್ರಮಗಳು ದಕ್ಷತೆಯಿಂದ ಕೆಲಸ ಮಾಡಿರುವುದು ಇದರಿಂದ ಗೊತ್ತಾಗುತ್ತದೆ. 2003ರ ಕ್ರಿಸ್ಮಸ್
ದಿನ ಲ್ಯಾಂಡರ್ ಯಶಸ್ವಿಯಾಗಿ ಮಂಗಳನಲ್ಲಿ ಇಳಿದಿದೆ’ ಎಂದು ಬ್ರಿಟನ್‌ನ ಬಾಹ್ಯಾಕಾಶ
ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬೀಗಲ್-2 ಎರಡು ಮೀಟರ್‌ಗಳಿಗೂ ಚಿಕ್ಕ
ಗಾತ್ರದ ಬಾಹ್ಯಾಕಾಶ ನೌಕೆ. ಚಾರ್ಲ್ಸ್ ಡಾರ್ವಿನ್ ಅವರು ವಿಕಾಸವಾದ ಸಿದ್ಧಾಂತವನ್ನು
ರೂಪಿಸಿದ ಹಡಗಿನ ನೆನಪಿಗಾಗಿ ಈ ಹೆಸರನ್ನು ನೌಕೆಗೆ ಇಡಲಾಗಿತ್ತು. ಸುಮಾರು 85 ದಶಲಕ್ಷ
ಡಾಲರ್ ವೆಚ್ಚದಲ್ಲಿ ಅದು ನಿರ್ಮಾಣಗೊಂಡಿತ್ತು. ಮಂಗಳನ ಮೇಲ್ಮೆಯಲ್ಲಿರಬಹುದಾದ ಜೀವಿಗಳ
ಗುರುತು ಪತ್ತೆಗಾಗಿ ಅದನ್ನು ಅಲ್ಲಿ ಇಳಿಸಲಾಗಿತ್ತು. ತದನಂತರ ಅದರಿಂದ ಯಾವುದೇ
ಮಾಹಿತಿಗಳು ಲಭಿಸಿರಲಿಲ್ಲ.
0 Comments
Comment is awaiting for approval