Ticker

6/recent/ticker-posts

ವಿಶ್ವ ಪುಸ್ತಕ ದಿನ

ಏಪ್ರಿಲ್  23 ನ್ನು ವಿಶ್ವದ ಹಲವೆಡೆ 'ಪುಸ್ತಕ' ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ ಹಲವರಿಗೆ ಪುಸ್ತವನ್ನು ಓದುವುದರ ಬಗ್ಗೆ ಭಿನ್ನಬಿಪ್ರಾಯಗಳಿವೆ. ಪುಸ್ತಕಗಳನ್ನು ಓದುವುದರಿಂದ ಏನು ಸಿಗುತ್ತದೆ ? ಎಂದು ಪ್ರಶ್ನಿಸುವವರಿದ್ದಾರೆ. ಬರೀ ಪುಸ್ತಕದ ಹುಳುವಾಗಿರುವುದರಿಂದ ಪ್ರಯೋಜನವಿಲ್ಲಾ, ನೈಜ ಜೀವನದ ಅನುಭವ ಮಾತ್ರವೇ ಜೀವನಕ್ಕೆ ಉಪಯೋಗವಾಗುತ್ತದೆ ಎಂದು ವಾದಿಸುವವರಿದ್ದಾರೆ. ಅವರ ವಾದವನ್ನು ಒಪ್ಪಲೇ ಬೇಕು. ಆದರೆ ಪುಸ್ತಕಗಳನ್ನು ಓದುವುದು ವ್ಯರ್ಥ ಎಂಬುದನ್ನು ಒಪ್ಪಿಕೊಳ್ಳಲು ಸಾದ್ಯವಿಲ್ಲ. 

ಒಬ್ಬ ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸಲು ಹಾಗು ಆತನ ಮನೋ ವಿಕಾಸಕ್ಕೆ ಪುಸ್ತಕಗಳು ನೆರವಾಗುತ್ತವೆ. ಪುಸ್ತಕಗಳು ನಮ್ಮೆ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದೊಂದು ಪುಸ್ತಕವೂ ತನ್ನದೇ ಆದ ಪ್ರಪಂಚವನ್ನು, ನಮಗೆ ಪರಿಚಯವಿಲ್ಲದ ಜೀವನವನ್ನು ನಮಗೆ ಪರಿಚಯಿಸುತ್ತವೆ. ಒಂದು ಪ್ರದೇಶದ ಸಂಸ್ಕೃತಿ, ಜನಜೀವನವನ್ನು ಆ ಭಾಷೆಯ ಮೂಲಕ ಬೆಳೆಸುವಲ್ಲಿ ಪುಸ್ತಕಗಳು ಸಹಾಯ ಮಾಡುತ್ತವೆ. ಭೂಮಿಯ ಮೇಲೆ ಮಾನವನ ಅಸ್ತಿತ್ವವನ್ನು ತಿಳಿದುಕೊಳ್ಳಲು ಪುಸ್ತಕಗಳು ನೆರವಾಗುತ್ತವೆ. ಪ್ರತಿಯೊಂದು ಪುಸ್ತಕವು ಹಲವು ತಲೆಮಾರುಗಳನ್ನು ದಾಟಿ ಹೋಗುತ್ತವೆ. ನಮ್ಮ ಚರಿತ್ರೆಯನ್ನು  ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ಪುಸ್ತಕಗಳು ಮಾಡುತ್ತವೆ.


ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮಕ್ಕಳಲ್ಲಿ ನಾವು ಚಿಕ್ಕ ವಯಸ್ಸಿನಿಂದಲೇ ಬೆಳೆಸುವುದು ಅಗತ್ಯವಾಗಿದೆ. ಮನೆಯಲ್ಲಿ ಅಂತಹ  ವಾತಾವರಣವನ್ನು ಕಲ್ಪಿಸಿಕೊಡಬೇಕು. ಪುಸ್ತಕಗಳು ಒಳ್ಳೆಯ ಸ್ನೇಹಿತರಿದ್ದಂತೆ. ಸಂತೋಷ, ದುಃಖ, ಕೋಪ ಮುಂತಾದ ಹಲವಾರು ಭಾವನೆಗಳನ್ನು ಪುಸ್ತಕಗಳು ಒದಗಿಸುತ್ತವೆ. ನಮ್ಮನ್ನು ಸಮಾಧಾನಪಡಿಸುವ,  ಬುದ್ಧಿ ಹೇಳುವ, ಧೈರ್ಯ ನೀಡುವ ಕಾರ್ಯವನ್ನು ಸಹ ಪುಸ್ತಕಗಳು ನಿರ್ವಹಿಸುತ್ತವೆ. 

ಪುಸ್ತಕಗಳು ಎಷ್ಟು ಶಕ್ತಿಯುತವಾದವು ಎಂಬುದಕ್ಕೆ, ಕೆಲವೊಂದು ಪುಸ್ತಕಗಳನ್ನು ಮಾರುಕಟ್ಟೆಗೆ ಬರದಂತೆ ನಿಷೇದಿಸುವುದೇ ಸಾಕ್ಷಿ. ಆ ಪುಸ್ತಕಗಳು ಸಮಾಜದಲ್ಲಿ ಉಂಟು ಮಾಡಬಹುದಾದ ಪರಿಣಾಮಗಳೆ, ಅದಕ್ಕೆ ಕಾರಣ. 

ಪುಸ್ತಕಗಳನ್ನು ಓದುವ ಹವ್ಯಾಸ ಜನರಲ್ಲಿ ಹೆಚ್ಚಾಗ ಬೇಕು. ವಿವಿಧ  ಭಾಷೆಯ, ವಿವಿಧ ವಿಷಯಗಳಿಗೆ ಸಂಭಂದಿಸಿದ ಪುಸ್ತಕಗಳನ್ನು ಓದಿ, ಇತರರೊಂದಿಗೆ ಹಂಚಿಕೊಳ್ಳಬೇಕು. ಅಂತರಾಷ್ಟ್ರೀಯ ಪುಸ್ತಕಗಳನ್ನು ಓದುವದರ ಜೊತೆಗೆ ನಮ್ಮ ಭಾಷೆಯ, ನಮ್ಮ ಲೇಖಕರ ಪುಸ್ತಕಗಳನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ಓದಬೇಕು. ಆಗ ಮಾತ್ರ ನಮ್ಮಲ್ಲಿ ಒಳ್ಳೆಯ ಸಾಹಿತಿಗಳು, ಬರಹಗಾರರು ಬೆಳೆಯಲು ಸಾಧ್ಯ. 

ಪುಸ್ತಕಗಳ ಮಹತ್ವವನ್ನು ಜನರು ಮನಗಂಡಾಗ ಮಾತ್ರ   'ವಿಶ್ವ ಪುಸ್ತಕ ದಿನ' ದ  ಪ್ರಾಮುಖ್ಯತೆಯನ್ನು ಅರಿಯಬಹುದು, ಮತ್ತು ಆ ದಿನವನ್ನು ನೆನಪಿನಲ್ಲಿಡ ಬಹುದು. 

                                                       - ಸೆಂದಿಲ್ 

Post a Comment

1 Comments

  1. ಪುಸ್ತಕಗಳನ್ನು ಓದುವ ಹವ್ಯಾಸ ಜನರಲ್ಲಿ ಹೆಚ್ಚಾಗ ಬೇಕು.

    ReplyDelete

Comment is awaiting for approval