ಉತ್ನಳ್ಳಿ ಮಾರಿ - ತಂದಾನಾ ತಾನಾನಾ ಜಾನಪದ ಗೀತೆ | Utnalli Maaramma Song Lyrics in Kannada
ಉತ್ನಳ್ಳಿ ಮಾರಮ್ಮ ಹಾಡು ಉತ್ನಳ್ಳಿ ಮಾರಮ್ಮ ದೇವಿಯ ಕುರಿತಾದ ಕನ್ನಡ ಜಾನಪದ ಗೀತೆಯಾಗಿದ್ದು, ಈ ದೇವಿಯನ್ನು ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮ ಎಂದೂ ಸಹ ಕರೆಯಲಾಗುತ್ತದೆ. ಇವರನ್ನು ಚಾಮುಂಡೇಶ್ವರಿ ದೇವಿಯ ಮತ್ತೊಂದು ರೂಪವೆಂದು ಪರಿಗಣಿಸಲಾಗಿದೆ.
ಮಹಿಷಾಸುರನೊಂದಿಗಿನ ಯುದ್ಧದ ಸಮಯದಲ್ಲಿ, ರಾಕ್ಷಸನು ತನ್ನ ರಕ್ತದ ಪ್ರತಿ ಹನಿಯಿಂದ ಪುನರುತ್ಥಾನಗೊಂಡಂತೆ ಚಾಮುಂಡೇಶ್ವರಿ ದೇವಿಯು ಸವಾಲನ್ನು ಎದುರಿಸಿದಳು ಎಂದು ಸ್ಥಳೀಯರು ನಂಬುತ್ತಾರೆ. ಇದನ್ನು ಎದುರಿಸಲು ಅವಳು ತನ್ನ ಬೆವರಿನಿಂದ ಉತ್ನಳ್ಳಿ ಮಾರಮ್ಮ ದೇವಿಯನ್ನು ಸೃಷ್ಟಿಸಿದಳು. ಮಾರಮ್ಮ ಮಹಿಷಾಸುರನ ಪುನರುತ್ಥಾನವನ್ನು ತಡೆಯಲು ಅವನ ರಕ್ತವನ್ನು ಕುಡಿಯುವ ಮೂಲಕ, ಚಾಮುಂಡೇಶ್ವರಿಯ ವಿಜಯವನ್ನು ಖಾತ್ರಿಪಡಿಸಿದಳು.
ತಂಗಿಯ ಸಾಹಸಕ್ಕೆ ಮೆಚ್ಚಿ ಚಾಮುಂಡಿ, ಬೆಟ್ಟದ ಹಿಂಭಾಗದಲ್ಲಿ ಮಾರಮ್ಮನನ್ನು ನೆಲಗೊಳ್ಳಲು ಸೂಚಿಸಿ ನನಗೆ ಬರುವ ಭಕ್ತರು ನಿನಗೂ ಪೂಜೆ ಸಲ್ಲಿಸಲಿ ಎಂದು ಆರ್ಶೀವಾದಿಸಿದಳು ಎಂಬ ಪ್ರತೀತಿ ಇದೆ. ಮೈಸೂರಿನ ಚಾಮುಂಡಿ ಬೆಟ್ಟದ ಸಮೀಪವಿರುವ ಉತ್ತನಹಳ್ಳಿಯಲ್ಲಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನವನ್ನು ಸಮರ್ಪಿಸಲಾಗಿದೆ. ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವರನ್ನು ಪೂಜಿಸುತ್ತಾರೆ.
ಉತ್ನಳ್ಳಿ ಮಾರಮ್ಮ ಹಾಡಿನ ಸಾಹಿತ್ಯವು ಸಾಂಪ್ರದಾಯಿಕ ಜಾನಪದ ಸಾಹಿತ್ಯವಾಗಿದ್ದು, ಇದನ್ನು ಜನರು ಮೌಖಿಕ ಪರಂಪರೆಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ರವಾನಿಸುತ್ತಿದ್ದರು.
ತಂದನಾನ ತಾನಾನಾ
ತಂದನ್ನ ತಂದನ ತಾನ
ತಂದನಾನ ತಾನಾನಾ..
ಹೋಗಿ ಮೂರು ತಿಂಗಳಾಯ್ತಲ್ಲವ್ವಾ
ಅವನೂ ಹೋದಾಗಿನಿಂದ
ನನ್ನ ಜನುಮಕ್ಕೆ ಅನ್ನ ನೀರು ನಿದ್ದೆ ಒಂದೂ ಸೇರಿಲ್ಲ
ನೆತ್ತಿ ಮ್ಯಾಲೆ ನೆರೆ ಬಂದಂತಾ
ಮುದಿ ನನ್ನ ಸವತಿಗೆ ಒಲಿಕೊಂಡು ಕುಳಿತಾನಲ್ಲವ್ವಾ
ತಂದಾನಾನಾ ತಾನಾನಾ
ಅವ್ನ್ಗೆ ಚೇಳಾದ್ರೂ ಚುಚ್ಚಬಾರದಾ
ಹೊಟ್ಟೀಗೆ ನೋವ್ ಬಂದೂ
ಕಟ್ಟೀಗೆ ಹಿಡಿಯಬಾರದಾ
ನಾಕಾರು ಜ್ವರ ಬಂದು
ನರಳಾಡಿ ಸಾಯಬಾರದಾ
ಕಳ್ಳಾ ಅವ್ನ್ ಸಾಯಾ
ಕೂಡಿಯೇ ಬರಲಿಲ್ಲ ತಂಗ್ಯವ್ವಾ…
ತಂದಾನಾನಾ ತಾನಾನಾ
ನಂಜನ ಗೂಡಿಗೆ ಹೋಗಿ
ಭಾವುನ್ಸೆ ಕರೆದೂ ಬಾರೇ
ಭಾವ ನಂಜುಂಡೇಶನಾ
ಚಿಕ್ಕ ತಂಗ್ಯಮ್ಮ ಕೇಳಿ
ಗಕ್ಕನೆ ತೇಜಿಯ ಏರಿ
ಹೊರಟಾಳು ಮಾರಮ್ಮ
ತಂದಾನಾನ ತಾನಾನ
ಮುಳ್ಳೂರು ಗುಡ್ಡದ ಮೇಲೆ
ಮತ್ತೊಂದು ಗುಡ್ಡ ಕುಂತವರಂತೆ ಕುಂತು
ತನ್ನ ಭಾವನನ್ನು
ಯಾವ ರೀತಿ ಅತೀ ಪ್ರೀತಿಯಿಂದಾ ಕರೆಯುತ್ತಾಳೆಂದರೆ
ಮಾತಿಗೆ ಮರುಳಾದೆ
ಪ್ರೀತಿಯುಳ್ಳರಸ ಮಾತನ್ನಾಡೋ
ಎದ್ದು ಬೀದಿಗೆ ಬಾರೋ
ಮುದ್ದುಳ ಮುಖವಾ ತೋರೋ
ಚಂದಕೆ ಮಾತನ್ನಾಡೋ
ಅಂದಕೆ ಬೀದಿಗೆ ಬಾರೋ
ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ
ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ
ಮೆಚ್ಚಿ ಮುಡಿಯೊಳು ನಾನೇ
ಎಚ್ಚಲಗಾರ ಮಾತನಾಡೋ ಹರನೇ
ಮಾತನಾಡೋ ಗುರುವೇ
ಮಾತನಾಡೋ ಶಿವನೇ
ಮಾತನಾಡೋ ದೊರೆಯೇ
ಹರಹರಹರಹರ ನಂಜುಂಡ
ಮನಸೇ ಇಲ್ವಯ್ಯೋ ನಿನ್ನ ಮಡದಿ ಮ್ಯಾಲೆ
ಕೂಗೋದು ಮೂರು ಮಾತು ಕೂಗಿ
ಕರೆಯೋದು ಮೂರು ಮಾತು ಕರೆದು
ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ
ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ
ತಂದನ್ನ ತಂದನ ತಾನ ತಂದನಾನ ತಾನಾನಾ..
0 Comments
Comment is awaiting for approval