ಕೇಂದ್ರ
ಸರ್ಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ
ಸೇರಿದಂತೆ ಜನಜೀವನದ ಮೇಲೆ ಪರಿಣಾಮ ಬೀರಲಿರುವ 12 ಮಹತ್ವದ ಬದಲಾವಣೆಗಳಿಗೆ ಭಾರತ
ಸಜ್ಜಾಗಿದೆ. ಜು.1ರಂದೇ ಈ ಎಲ್ಲ ಬದಲಾವಣೆ ಪ್ರಕ್ರಿಯೆಗಳಿಗೂ ಮುಹೂರ್ತ ನಿಗದಿಯಾಗಿದ್ದು,
ಅವುಗಳ ಕುರಿತ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
ಐಟಿ ರಿಟರ್ನ್ಸ್ಗೆ ಬೇಕು ಆಧಾರ್: ಕಳೆದ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಸಂಖ್ಯೆ ಉಲ್ಲೇಖಿಸುವುದು ಕಡ್ಡಾಯ. ಅದಿಲ್ಲದೇ ಹೋದಲ್ಲಿ ಜುಲೈ 1ರಿಂದ ಐಟಿ ರಿಟರ್ನ್ಸ್ ಸಲ್ಲಿಸಲಾಗುವುದಿಲ್ಲ
ಪ್ಯಾನ್ ಲಿಂಕ್ ಕಡ್ಡಾಯ: ಹಲವು ಪ್ಯಾನ್ ಬಳಸಿಕೊಂಡು ತೆರಿಗೆ ವಂಚನೆ ನಡೆಸುವುದನ್ನು ತಪ್ಪಿಸುವ ಸಲುವಾಗಿ ಪ್ಯಾನ್ಗೆ ಆಧಾರ್ ಜೋಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಆದಾಯ ತೆರಿಗೆ ಕಾಯ್ದೆ ಸೆ.139ಎಎ ಮೂಲಕ ಇದನ್ನು ಮಾನ್ಯಮಾಡಿದೆ ಕೂಡ. ಇದರಂತೆ ಆಧಾರ್ ಜೋಡಿಸದೇ ಹೋದರೆ ಪ್ಯಾನ್ಗೆ ಮಾನ್ಯತೆ ಇರುವುದಿಲ್ಲ.
ಹೊಸ ಪ್ಯಾನ್ಗೂ ಆಧಾರ್ ಬೇಕು: ಹೊಸದಾಗಿ ಪ್ಯಾನ್ ಕಾರ್ಡ್ ಪಡೆಯಬೇಕಾದರೆ ಆಧಾರ್ ನೀಡುವುದು ಅತೀ ಅವಶ್ಯ. ಶನಿವಾರದಿಂದಲೇ ಅನ್ವಯವಾಗುವಂತೆ ಇದು ಕಡ್ಡಾಯವಾಗಿ ಜಾರಿಗೆ ಬರುತ್ತಿದೆ.
ಪಾಸ್ಪೋರ್ಟ್ಗೂ ಅನ್ವಯ: ಪಾಸ್ಪೋರ್ಟ್ ಪಡೆಯಬೇಕಾದರೆ ಇನ್ನು ಆಧಾರ್ ಕೂಡ ಅತ್ಯಗತ್ಯ. ಜುಲೈ 1ರಿಂದ ಅನ್ವಯವಾಗುವಂತೆ ಇದನ್ನು ಕಡ್ಡಾಯಗೊಳಿಸಿ ವಿದೇಶಾಂಗ ಸಚಿವಾಲಯ ಆದೇಶ ಹೊರಡಿಸಿದೆ. ಇದಕ್ಕಾಗಿ ಆದಾಯ ತೆರಿಗೆ ಕಾಯ್ದೆ ನಿಯಮ 114ಕ್ಕೆ ತಿದ್ದುಪಡಿ ತರಲಾಗಿದೆ.
ಪಿಎಫ್ಗೂ ಅನ್ವಯ: ನೌಕರರ ಪಿಂಚಣಿ ನಿಧಿ ಸಂಘಟನೆ (ಇಪಿಎಫ್ಒ) ಕೂಡ ಸದಸ್ಯರ ಪಿಎಫ್ ಖಾತೆಯನ್ನು ಆಧಾರ್ ಜತೆ ಜೋಡಿಸುವುದನ್ನು ಕಡ್ಡಾಯಗೊಳಿಸಿದೆ. ಜೂ.30ರೊಳಗೆ ಇದನ್ನು ಮಾಡಬೇಕಾಗಿದೆ. ಆಧಾರ್ ಜೋಡಣೆಯಾದರೆ ಇಪಿಎಫ್ ವಿತ್ಡ್ರಾವಲ್ ಹಾಗೂ ತತ್ಸಬಂಧಿ ಪ್ರಕ್ರಿಯೆ ಈಗಿರುವ 20 ದಿನಗಳ ಅವಧಿಯಿಂದ 10 ದಿನಕ್ಕೆ ಇಳಿಕೆಯಾಗಲಿದೆ.
ರೈಲ್ವೆ ರಿಯಾಯಿತಿಗೂ ಆಧಾರ್: ರೈಲ್ವೆ ಟಿಕೆಟ್ ಕಾಯ್ದಿರಿಸುವಾಗ ಆಗುತ್ತಿರುವ ರಿಯಾಯಿತಿ ದುರ್ಬಳಕೆ ಮತ್ತು ಹಣ ಸೋರಿಕೆ ತಡೆಗಟ್ಟುವ ಸಲುವಾಗಿ ರೈಲ್ವೆ ಸಚಿವಾಲಯವೂ ಟಿಕೆಟ್ ಖರೀದಿ ಹಾಗೂ ಕಾಯ್ದಿರಿಸಲು ಶನಿವಾರದಿಂದಲೇ ಜಾರಿಗ ಬರುವಂತೆ ಆಧಾರ್ ಸಂಖ್ಯೆ ಉಲ್ಲೇಖಿಸುವುದನ್ನು ಕಡ್ಡಾಯ ಮಾಡಿದೆ.
ಸ್ಕಾಲರ್ಶಿಪ್ಗೂ ಕೊಡ್ಬೇಕು: ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆಯಲು ಆಧಾರ್ ಕಡ್ಡಾಯ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಸ್ಕಾಲರ್ಶಿಪ್ ಬಯಸುವ ವಿದ್ಯಾರ್ಥಿಗಳು ಶುಕ್ರವಾರದೊಳಗೆ ಆಧಾರ್ ವಿವರವನ್ನು ಸಚಿವಾಲಯಕ್ಕೆ ತಲುಪಿಸಬೇಕು.
ಪಡಿತರಕ್ಕೂ ಬೇಕೇ ಬೇಕು: ಅರ್ಹ ಫಲಾನುಭವಿಗಳು ಪಿಡಿಎಸ್ನಲ್ಲಿ ಸಹಾಯಧನದ ಆಹಾರ ಧಾನ್ಯ ಪಡೆಯಬೇಕಾದರೆ ಪಡಿತರ ಚೀಟಿಯನ್ನೂ ಆಧಾರ್ ಜತೆ ಜೋಡಿಸಬೇಕು. ಇಲ್ಲದೇ ಹೋದರೆ ಶನಿವಾರದಿಂದ ಪಡಿತರ ಸಿಗಲ್ಲ.
ವಿಮಾನಯಾನ ಸುಖಕರ: ವಿದೇಶಕ್ಕೆ ತೆರಳುವ ಭಾರತೀಯರು ಶನಿವಾರದಿಂದ ನಿರ್ಗಮನ ಅರ್ಜಿ ನೀಡಬೇಕಾಗಿಲ್ಲ. ಈ ನಿಯಮ ಶನಿವಾರದಿಂದ ಜಾರಿಗೆ ಬರಲಿದ್ದು, ವಲಸೆ ಮಾಹಿತಿ ಒದಗಿಸುವ ಔಪಚಾರಿಕತೆಯನ್ನು ಪೂರ್ಣಗೊಳಿಸುವುದಕ್ಕೆ ತಗಲುವ ಸಮಯ ಕಡಿಮೆಯಾಗಲಿದೆ. ಅಲ್ಲದೆ, ಸುಖಕರ ಪ್ರಯಾಣಕ್ಕೂ ಇದು ಅವಕಾಶ ನೀಡಲಿದೆ.
ಸೌದಿಯಲ್ಲಿ ತೆರಿಗೆ ಹೊರೆ: ಸೌದಿ ಅರೇಬಿಯಾದಲ್ಲಿ ವಿದೇಶಿಯರ ಮೇಲೆ ವಿಧಿಸಿರುವ ಕುಟುಂಬ ತೆರಿಗೆ ಜುಲೈ 1ರಿಂದ ಅನ್ವಯವಾಗಲಿದೆ. ಇದರಂತೆ ವಿದೇಶಿ ಉದ್ಯೋಗಿ ಮತ್ತು ಅವರ ಅವಲಂಬಿತರು ತಲೆಗೆ 100 ರಿಯಾಲ್(1,721 ರೂ.) ವಾರ್ಷಿಕ ಶುಲ್ಕ ಪಾವತಿಸಬೇಕು. ಮುಂದಿನ ವರ್ಷ ಜುಲೈನಿಂದ ತಲಾ 200 ರಿಯಾಲ್, ಹೀಗೆ ಅನುಕ್ರಮವಾಗಿ 2020ರ ತನಕ ಇದು ಮುಂದುವರಿಯಲಿದೆ.
ಸಿಎ ಹೊಸ ಸಿಲೆಬೆಸ್: ಲೆಕ್ಕಪರಿಶೋಧಕರಾಗ ಬಯಸುವವರು ಜುಲೈ 1ರಿಂದ ಹೊಸ ಸಿಲೆಬಸ್ ಓದಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ ಈ ಹೊಸ ಪಠ್ಯಕ್ರಮ ಲೋಕಾರ್ಪಣೆಗೊಳಿಸಲಿದ್ದಾರೆ. ಇದು ಅಂತಾರಾಷ್ಟ್ರೀಯ ಲೆಕ್ಕಪರಿಶೋಧಕರ ಫೆಡರೇಷನ್ನ ಅಂತಾರಾಷ್ಟ್ರೀಯ ಶಿಕ್ಷಣದ ಗುಣಮಟ್ಟಕ್ಕೆ ಸಮವಾಗಿದೆ. ಇದರಲ್ಲಿ ಜಿಎಸ್ಟಿಯನ್ನೂ ಅಳವಡಿಸಲಾಗಿದೆ.
ಆನ್ಲೈನ್ ವೀಸಾ: ಆಸ್ಟ್ರೇಲಿಯಾಕ್ಕೆ ಹೋಗಬಯಸುವ ಭಾರತೀಯರು ಶನಿವಾರದಿಂದ ಆನ್ಲೈನ್ ವೀಸಾಕ್ಕೆ ಅಪ್ಲೈ ಮಾಡಬಹುದು. ಈ ಬಗ್ಗೆ ಅಲ್ಲಿನ ಸರ್ಕಾರ ಅಧಿಸೂಚನೆಯನ್ನೂ ಪ್ರಕಟಿಸಿತ್ತು. ಆನ್ಲೈನ್ ಪ್ರಕ್ರಿಯೆ ಅನುಮೋದನೆ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಲಿದೆ.
ಮದ್ಯಮುಕ್ತ ಹೆದ್ದಾರಿ: ಹೆದ್ದಾರಿಗಳ ಅಪಘಾತ ತಪ್ಪಿಸುವ ಉದ್ದೇಶದಿಂದ ಹೈವೇಗಳ 500 ಮೀಟರ್ ಅಂತರದಲ್ಲಿರುವ ಬಾರ್, ರೆಸ್ಟೋರೆಂಟ್ಗಳು ಜು.1ರಿಂದ ವಹಿವಾಟು ಸ್ಥಗಿತಗೊಳಿಸಲಿವೆ.
0 Comments
Comment is awaiting for approval