Ticker

6/recent/ticker-posts

ಪುಂಡಲೀಕ ಹಾಲಂಬಿ ನಿಧನ

ಪುಂಡಲೀಕ ಹಾಲಂಬಿ ನಿಧನ : ಹೋಟೆಲ್‌ ಉದ್ಯಮದಾರರ ಸಹಕಾರ ಬ್ಯಾಂಕ್‌ ಅಧ್ಯಕ್ಷ, ಉದ್ಯಮಿ ಪುಂಡಲೀಕ ಹಾಲಂಬಿ [Pundalika Halambi] ಅವರು ಭಾನುವಾರ ನಿಧನರಾದರು . ಅವರಿಗೆ ೬೫ ವರ್ಷ ವಯಸ್ಸಾಗಿತ್ತು.  ಹಾಲಂಬಿ ಅವರಿಗೆ ಪತ್ನಿ ಸರೋಜಮ್ಮ, ಪುತ್ರರಾದ ರಾಘವ ಹಾಲಂಬಿ ಮತ್ತು ಭಾರ್ಗವ ಹಾಲಂಬಿ ಇದ್ದಾರೆ.

1951ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಚಂದ್ರಶೇಖರ ಹಾಲಂಬಿ ಮತ್ತು ವಾಸಂತಿ ದಂಪತಿಗಳ ಪುತ್ರರಾಗಿ ಜನಿಸಿದ ಪುಂಡಲೀಕ ಹಾಲಂಬಿ ಅವರು ಅರಕಲಗೂಡು ಹಾಗು ಕುಂದಾಪುರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿದರು. ನಂತರ
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಪದವಿ ಪಡೆದು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಂಯೋಜನಾ ಅಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡರು. ಆ ಸಂದರ್ಭದಲ್ಲೇ ವಿವಿ ನೌಕರರ ಸಂಘದ ಅಧ್ಯಕ್ಷ, ವಿವಿ ಗೃಹ ನಿರ್ಮಾಣ ನೌಕರರ ಸಂಘದ ಅಧ್ಯಕ್ಷರಾಗುವ ಮೂಲಕ ತಾವೊಬ್ಬ ಸಂಘಟಕ ಎಂಬುದನ್ನು ತೋರಿಸಿಕೊಟ್ಟರು.

ನಿವೃತ್ತಿಯ ಬಳಿಕ ಸಾಹಿತ್ಯ ಕ್ಷೇತ್ರದ ಜತೆಗೆ ಹೋಟೆಲ್‌ ಉದ್ಯಮದಲ್ಲೂ ತಮ್ಮನ್ನು ತೊಡಗಿಸಿಕೊಂಡ ಅವರು, ಹೋಟೆಲ್‌ ಉದ್ಯಮದಾರರ ಸಹಕಾರ ಬ್ಯಾಂಕ್‌ನಲ್ಲಿ ನಿರ್ದೇಶಕರಾಗಿ, ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1997ರಿಂದ ಬ್ಯಾಂಕ್‌ನ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆಯಲ್ಲಿ 10 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇದರ ಮಧ್ಯೆಯೇ ಗೋಕಾಕ್‌ ಚಳವಳಿ ಮೂಲಕ ಕನ್ನಡ ಹೋರಾಟದಲ್ಲೂ ತೊಡಗಿಕೊಂಡ ಅವರು ಅದರ ಜತೆ ಜತೆಗೆ ಸಾಹಿತ್ಯ ಪರಿಷತ್ತಿಗೂ ಕಾಲಿಟ್ಟು ಅಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದಾರೆ. 14 ವರ್ಷ ಖಜಾಂಚಿಯಾಗಿ ಸಾಕಷ್ಟು ಸಾಧನೆ ಮಾಡಿದ್ದರಿಂದಾಗಿ 2012ರ ಮೇ ತಿಂಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ 24ನೇ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ 2015ರ ನವೆಂಬರ್‌ವರೆಗೆ ಕೆಲಸ ಮಾಡಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ತಾನೇ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಳ್ಳುತ್ತಿದ್ದರು. ಆದರೆ, ನ್ಯುಮೋನಿಯಾ ಸೋಂಕು ಕಾಣಿಸಿಕೊಂಡ ಕಾರಣ ಭಾನುವಾರ  ಬೆಳಗ್ಗೆ 7.30ರ ಸುಮಾರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.




Post a Comment

0 Comments