Ticker

6/recent/ticker-posts

ಡಾ. ರಾಜ್‌ಕುಮಾರ್ ಅಭಿನಯಿಸಿದ ಬಬ್ರುವಾಹನ ಇಂದು ರಾಜ್ಯಾದ್ಯಂತ ತೆರೆಗೆ

ಡಾ. ರಾಜ್‌ಕುಮಾರ್  [Dr. Rajkumar] ಅಭಿನಯಿಸಿದ  ಬಬ್ರುವಾಹನ  [Babruvahana] ಚಿತ್ರ ಆಧುನಿಕ ತಂತ್ರಜ್ಞಾನದೊಂದಿಗೆ   ಏಪ್ರಿಲ್ 22ರಂದು  ರಾಜ್ಯಾದ್ಯಂತ  ತೆರೆಕಾಣುತ್ತಿದೆ. 

ಸುಮಾರು 40 ವರ್ಷಗಳ ಹಿಂದೆ  1977ರಲ್ಲಿ ಕೆಸಿಎನ್ ಗೌಡರ  ಸಂಸ್ಥೆಯಲ್ಲಿ ನಿರ್ಮಾಣವಾದ ಈ ಚಿತ್ರ ಆಗಿನ  ಕಾಲದಲ್ಲಿ  ಕರ್ನಾಟಕದಾದ್ಯಂತ ಯಶಸ್ವೀ ಪ್ರದರ್ಶನ ಕಂಡು  ರಜತೋತ್ಸವ ಸಮಾರಂಭ ಆಚರಿಸಿತ್ತು.

39 ವರ್ಷಗಳ ನಂತರ  ಈ ಚಿತ್ರವನ್ನು   ಡಿಜಿಪೆಪ್ ಎಂಬ ಸಂಸ್ಥೆ   7.1 ಸೌಂಡ್ ಡಿಜಿಟಲ್ ಟೆಕ್ನಾಲಜಿಯೊಂದಿಗೆ  ನೂತನ ತಂತ್ರಜನವನ್ನು ಅಳವಡಿಸಿ ಈ ಚಿತ್ರವನ್ನು  ಆಧುನೀಕರಣಗೊಳಿಸಿದೆ. ಈ ಕೆಲಸವನ್ನು ಮಧುಸುಧನ್ ಹಾಗೂ ತಂಡ ನಿರ್ವಹಿಸಿದೆ.

ಡಾ|| ರಾಜ್‌ಕುಮಾರ್ ದ್ವಿಪಾತ್ರದಲ್ಲಿ  ಕಾಣಿಸಿಕೊಂಡಿರುವ  ಈ ಚಿತ್ರದಲ್ಲಿ  ಬಿ. ಸರೋಜದೇವಿ, ಕಾಂಚನ ಹಾಗೂ  ಜಯಮಾಲಾ ನಾಯಕಿಯರಾಗಿ  ಕಾಣಿಸಿಕೊಂಡಿದ್ದಾರೆ.  ತೂಗುದೀಪ ಶ್ರೀನಿವಾಸ್, ವಜ್ರಮುನಿ, ಶಕ್ತಿಪ್ರಸಾದ್, ರಾಜನಂದ್, ರಾಮಕೃಷ್ಣ  ಮುಂತಾದವರ ಅದ್ದೂರಿ ತಾರಾ ಬಳಗ ಈ ಚಿತ್ರದಲ್ಲಿದೆ. ಈ ಚಿತ್ರದಲ್ಲಿನ  ನಿನ್ನ ಕಣ್ಣ ನೋಟದಲ್ಲೆ, ಆರಾಧಿಸುವೆ ಮದನಾರಿ, ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಮುಂತಾದ  ಹಾಡುಗಳನ್ನು ಕನ್ನಡ ಪ್ರೇಕ್ಷಕರು ಇಂದಿಗೂ ಮರೆತಿಲ್ಲ.

ಬಬ್ರುವಾಹನ  ಚಿತ್ರಕ್ಕೆ  ಹುಣಸೂರು ಕೃಷ್ಣಮೂರ್ತಿ ಅವರು ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಚಿ. ಉದಯಶಂಕರ್ ಅವರ ಸಾಹಿತ್ಯ, ಟಿ.ಜಿ. ಲಿಂಗಪ್ಪ  ಅವರ ಸಂಗೀತ, ಭಕ್ತವತ್ಸಲಂರ  ಸಂಕಲನ, ವೈ. ಶಿವಯ್ಯ ಅವರ ಸಾಹಸವಿದೆ.     ಈ ಚಿತ್ರವು 1976-77ರಲ್ಲಿ  ಅತ್ಯುತ್ತಮ ನಟ (ರಾಜ್‌ಕುಮಾರ್)  ಮತ್ತು ಅತ್ಯುತ್ತಮ ಧ್ವನಿಗ್ರಹಣಕ್ಕಾಗಿ (ಎಸ್.ಪಿ. ರಾಮನಾಥನ್) ಎರಡು   ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು  ಪಡೆದು ಕೊಂಡಿತ್ತು.

ಈ ಚಿತ್ರದ ಪೂರ್ವಭಾವೀ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ  ಮೊನ್ನೆ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ನಟಿ ಬಿ. ಸರೋಜದೇವಿ, ಚಿತ್ರದಲ್ಲಿ   ಕೃಷ್ಣನ ಪಾತ್ರ ನಿರ್ವಹಿಸಿದ್ದ  ನಟ ರಾಮಕೃಷ್ಣ  ನಿರ್ದೇಶಕ ಭಾರ್ಗವ, ಕೆಸಿಎನ್ ಮೋಹನ್, ಪೂರ್ಣಿಮಾ ಸೇರಿದಂತೆಹಲವಾರು ಪ್ರಮುಖರು ಈ ಪ್ರದರ್ಶನದಲ್ಲಿ  ಪಾಲ್ಗೊಂಡು ಚಿತ್ರ ವೀಕ್ಷಿಸಿ  ಚಿತ್ರದ  ಬಗ್ಗೆ  ಮಾತನಾಡಿದರು.

ಈ ಬಾರಿ ಡಾ|| ರಾಜ್ ಹುಟ್ಟುಹಬ್ಬವನ್ನು  ಹಿಂದೆಂದಿಗಿಂತಲೂ ಸ್ಮರಣೀಯವಾಗಿಸಲು ನಿರ್ಧರಿಸಿರುವ  ಹೆಸರಾಂತ ಕೆ.ಸಿ.ಎನ್. ಚಿತ್ರ ನಿರ್ಮಾಣ ಸಂಸ್ಥೆ  ಬಬ್ರುವಾಹನ ಸಿನಿಮಾವನ್ನು  ಹೊಸ ಅವತರಣಿಕೆಯಲ್ಲಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದೆ.   

Post a Comment

1 Comments

Comment is awaiting for approval