Ticker

6/recent/ticker-posts

ನಖಕ್ಷತಂಗಲ್

ಕೆಲವು ದಿನಗಳ ಹಿಂದೆ, ನಾನು ನೋಡಿದ ಮಲಯಾಳಂ ಚಿತ್ರ 'ನಖಕ್ಷತಂಗಲ್'. ಮಲಯಾಳಂ ಸಿನಿಮ ಮತ್ತು ಸಾಹಿತ್ಯ ಸದಾ ನನ್ನ ಮನಸಿಗೆ ಹತ್ತಿರವಾದ ವಿಷಯಗಳು. ವಿಶ್ವದ ಶ್ರೇಷ್ಠ ಚಿತ್ರಗಳನ್ನು ಹುಡುಕಿ ಹುಡುಕಿ ನೋಡುವ ನನಗೆ, ಮಲಯಾಳಂ ಸಿನಿಮ ಹೊಸದೇನಲ್ಲ. ಹಲವಾರು ಮಲಯಾಳಂ ಚಿತ್ರಗಳನ್ನು ನೋಡಿರುವ ನಾನು, ಅವುಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಈ ನನ್ನ ಬ್ಲಾಗನ್ನು ಬಳಸಿಕೊಳ್ಳುತ್ತಿದ್ದೇನೆ.

ಮಲಯಾಳಂ ಸಿನಿಮಾದ ಶ್ರೇಷ್ಟತೆಗೆ ಮುಖ್ಯ ಕಾರಣ ಸಾಹಿತ್ಯದೊಡನೆ ಹಾಗು ವಾಸ್ತವತೆ ಜೊತೆಗಿರುವ ಅದರ ಸಂಬಂಧ. ಹೆಚ್ಚಿನ ವೈಭವೀಕರಣ ಇಲ್ಲದೆ ಸರಳ ಹಾಗು ನೈಜ ಜೀವನ ಚಿತ್ರವನ್ನು ಚಿತ್ರಿಸುವ ಚಲನ ಚಿತ್ರಗಳು ಪ್ರೇಕ್ಷಕರ ನೆಚ್ಚಿನ ಚಿತ್ರಗಳಾಗುತ್ತವೆ. ಎಲ್ಲ ಭಾಷೆಗಳಲ್ಲೂ ಕೆಲವು ಕಲಾವಿದರು ಆ ನಿಟ್ಟಿನಲ್ಲಿ ದುಡಿಯುತ್ತಲೇ ಬಂದಿದ್ದಾರೆ. ಮಲಯಾಳಂ ಚಿತ್ರರಂಗದಲ್ಲೂ ಇಂತಹ ಉತ್ತಮ ಕಲಾವಿದರು, ಉತ್ತಮ ಚಿತ್ರಗಳನ್ನು ನಮಗೆ ನೀಡಿದ್ದಾರೆ.

ನಕ್ಷತ್ರಂಗಳ್ ಒಂದು ತ್ರಿಕೋನ ಪ್ರೇಮ ಕಥೆ. ಎಂ. ಟಿ. ವಾಸುದೇವನ್ ನಾಯರ್ ಅವರ ಚಿತ್ರಕಥೆ ಹಾಗು ಹರಿಹರನ್ ಅವರ ನಿರ್ದೇಶನ, ರವಿ ಅವರ ಸಂಗೀತವಿರುವ ಈ ಚಿತ್ರದಲ್ಲಿ ವಿನೀತ್, ಮೊನೀಶ ಹಾಗು ಸಲೀಮ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


 ತನ್ನ ಮಾವನ ಜೊತೆ ಜೀವಿಸುತ್ತಿರುವ ೧೬ ವರ್ಷದ ಯುವಕ ರಾಮು (ವಿನೀತ್). ಮಾವ ತುಂಬ ಕೋಪಗೊಳ್ಳುವ ಸ್ವಭಾವದವ. ರಾಮು, ಅವರು ಹೇಳಿದ ಕೆಲಸಗಳನ್ನು ಮಾಡಬೇಕು. ಕವಿತೆಯಲ್ಲಿ ರಾಮುವಿಗೆ ಆಸಕ್ತಿ. ಒಮ್ಮೆ ತನ್ನ ಮಾವನೊಂದಿಗೆ ಗುರುವಾಯೂರು ಸನ್ನಿದೆಗೆ ಯಾತ್ರೆಗೆಂದು ಹೋಗುವ ರಾಮು, ಅಲ್ಲಿ ೧೫ ವರ್ಷದ ಹುಡುಗಿ ಗೌರಿಯನ್ನು (ಮೊನೀಶ) ಭೇಟಿಯಾಗುತ್ತಾನೆ. ತನ್ನ ಅಜ್ಜಿಯೊಂದಿಗೆ ಬಂದಿರುವ ಆಕೆ ರಾಮುವಿನೊಂದಿಗೆ ಸ್ನೇಹ ಬೆಳೆಸುತ್ತಾಳೆ. ರಾಮು ತಾನು ಮುಂದೆ ಕಾಲೇಜ್ ಸೇರಿ ವ್ಯಾಸಂಗವನ್ನು ಮುಂದುವರಿಸಬೇಕು ಎಂಬ ತನ್ನ ಆಸೆಯನ್ನು ಅವಳೊಂದಿಗೆ ಹಂಚಿಕೊಳ್ಳುತ್ತಾನೆ. ಗೌರಿ ತನ್ನ ಊರಿನ ಬಗ್ಗೆ ರಾಮುವಿಗೆ ಹೇಳುತ್ತಾಳೆ. ಇಬ್ಬರ ಸ್ನೇಹ, ಪ್ರೇಮವಾಗಿ ಅರಳುತ್ತಿದಂತೆ, ಯಾತ್ರೆ ಮುಗಿಸಿ ಗೌರಿ ತನ್ನ ಸ್ವಗ್ರಾಮಕ್ಕೆ ಮರಳುತ್ತಾಳೆ.

ಸ್ವಗ್ರಾಮಕ್ಕೆ ಮರಳುವ ರಾಮು, ಮಾವ ಹೇಳುವ ಕೆಲಸಗಳನ್ನು ಮಾಡುತ್ತಾ ತನ್ನ ಭವಿಷ್ಯದ ಬಗ್ಗೆ ಚಿಂತಿಸುತ್ತಿರಬೇಕಾದರೆ, ಊರಿನ ಶ್ರೀಮಂತರ ಮಗನಾದ  ವ್ಯಕ್ತಿ, ತಾನು ಸಂಗೀತ ಕಲಿಯಲು, ಬೇರೊಂದು ಊರಿಗೆ ಹೋಗುತ್ತಿರುವುದಾಗಿ ಹೇಳಿ, ತನ್ನ ಸಹಾಯಕ್ಕೆ ತನ್ನ ಜೊತೆ ಬರುವಂತೆ ರಾಮುವಿಗೆ ಹೇಳುತ್ತಾನೆ.

ತನ್ನ ಮಾವನ ಮಾತನ್ನು ಮೀರಿ ರಾಮು ಆ ವ್ಯಕ್ತಿಯೊಂದಿಗೆ ಆ ಊರಿಗೆ ಹೋಗುತ್ತಾನೆ. ಅಲ್ಲಿ ಅವನು ಗೌರಿಯನ್ನು ಮತ್ತೆ ಭೇಟಿಯಾಗುತ್ತಾನೆ. ಮನೆ ಕೆಲಸವನ್ನು ಮಾಡುತ್ತಾ, ಆ ಶ್ರೀಮಂತನ ಸಹಾಯದಿಂದ, ರಾಮು ಕಾಲೇಜಿಗೆ  ಸೇರುತ್ತಾನೆ.

ಒಂದು ದಿನ, ಆ ಶ್ರೀಮಂತ ತಾನು  ಸಂಗೀತ ಕಲಿತದ್ದು ಸಾಕೆಂದು ಹೇಳಿ, ತಾನು ಸ್ವಗ್ರಾಮಕ್ಕೆ ಮರುಳುತ್ತೆನೆಂದು ಹೇಳುತ್ತಾನೆ. ರಾಮು ತನ್ನ ಭವಿಷ್ಯದ ಬಗ್ಗೆ ಚಿಂತೆಗೊಳಗಾಗುತ್ತಾನೆ. ಆಗ ಗೌರಿ ತಾನು ಕೆಲಸ ಮಾಡುವ ಮನೆಯಲ್ಲೇ , ರಾಮುವಿಗೆ ಒಂದು ಕೆಲಸ ಕೊಡಿಸುತ್ತಾಳೆ. 

ರಾಮುವಿನ ಸನ್ನಡತೆ ಹಾಗು ಬುದ್ದಿವಂತಿಕೆ ಆ ಮನೆಯ ಯಜಮಾನರಾದ ಲಾಯರ್ ಅವರ ಗಮನಕ್ಕೆ ಬರುತ್ತದೆ. ಅವರು ರಾಮುವನ್ನು ತನ್ನ ಮನೆಯಲ್ಲೇ ಉಳಿದಿಕೊಳ್ಳುವಂತೆ ಹೇಳಿ, ವಿಧ್ಯಾಬ್ಯಾಸಕ್ಕೆ ಬೇಕಾದ ಸಹಾಯ ಮಾಡುತ್ತಾರೆ. ಈ ನಡುವೆ ಲಾಯರ್  ಅವರ  ಮಗಳು ಲಕ್ಷ್ಮೀ [ಮಾತುಬಾರದ] ರಾಮುವನ್ನು ಪ್ರೀತಿಸುತ್ತಾಳೆ. 

ಲಾಯರ್ ಅವರ ವಯಸ್ಸಾದ ತಾಯಿ, ತಾನು ಸಾಯುವ ಮುನ್ನ ತನ್ನ ಮೊಮ್ಮಗಳ ಮಧುವೆಯನ್ನು ನೋಡಬೇಕೆಂದು ಹೇಳಿ , ಲಕ್ಷೀಗೆ, ರಾಮು ತಕ್ಕ ಹುಡುಗ ಎಂಬ ಸಲಹೆ ನೀಡಿ ವಿವಾಹಕ್ಕೆ ಏರ್ಪಾಡು ಮಾಡುವಂತೆ ಹೇಳುತ್ತಾರೆ.  ಲಾಯರ್ ಈ ಬಗ್ಗೆ ರಾಮುವಿನೊಂದಿಗೆ ಚರ್ಚಿಸುವಾಗ ರಾಮು ತನಗೆ ಈ ವಿವಾಹದಲ್ಲಿ ಇಷ್ಟವಿಲ್ಲ ಎಂದು ಹೇಳುತ್ತಾನೆ. 

ಈ ತ್ರಿಕೋನ ಪ್ರೇಮ ಕಥೆ ಕೊನೆಗೆ ಶೋಕದಲ್ಲಿ ಮುಗಿದು, ನಮ್ಮ  ಮನಸನ್ನು ಭಾರವಾಗಿಸುತ್ತದೆ.


ಮೊನೀಶ
ವಿನೀತ್, ಮೊನೀಶ ಹಾಗು ಸಲೀಮ ಅವರ ಅಭಿನಯ ಪ್ರಶಂಸಾರ್ಹ. ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಮೋನಿಶ , ಚೊಚ್ಚಲ ಚಿತ್ರದಲ್ಲೇ ಉತ್ತಮ ನಟಿ - ರಾಷ್ಟ್ರ ಪ್ರಶಸ್ತಿ ಗಳಿಸಿದರು. ಹಾಗು ಈ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ನಟಿ ಎಂಬ ಹೆಮ್ಮೆಗೆ ಪಾತ್ರರಾದರು. 

ಇಂತಹ ಅಪರೂಪದ ಪ್ರತಿಭೆ, ಕಾರು ಅಪಘಾತದಲ್ಲಿ ಮರಣ ಹೊಂದಿದ್ದು ದುರಾದೃಷ್ಟಕರ. ಅವರಿಗೆ ಆಗ ವಯಸ್ಸು ಕೇವಲ ೨೧. 

ನಖಕ್ಷತಂಗಲ್ ಒಂದು ಉತ್ತಮ ಚಿತ್ರ.  ನಮ್ಮ ಹದಿಹರೆಯದ ವಯಸ್ಸಿನ ಕೆಲವು ನೆನಪುಗಳನ್ನು ಕೆದಕುವ ಚಿತ್ರ. 





More Links
  1. ನಾಯಗನ್ - 1987 
  2. ಹುಣಸೂರು ಕೃಷ್ಣ ಮೂರ್ತಿ
  3. ವಾದಿರಾಜ್‌






Post a Comment

0 Comments