Ticker

6/recent/ticker-posts

ಬೆಂಗಳೂರು ಪುಸ್ತಕೋತ್ಸವ ೨೦೧೨

ಬೆಂಗಳೂರು ಪುಸ್ತಕೋತ್ಸವ ೨೦೧೨, ೧೦ನೇ ಆವೃತ್ತಿ , ಈ ತಿಂಗಳ ೧೪ ರಂದು ಆರಂಭವಾಗಿ ೨೩ ರ ವರೆಗೆ, ನಗರದ ಅರಮನೆ ಮೈದಾನದ, ತ್ರಿಪುರ ವಾಸಿನಿಯಲ್ಲಿ  ನಡೆಯಲಿದೆ.

ಈ ವರ್ಷದ  ಪುಸ್ತಕೋತ್ಸವದ  ಅಂಗವಾಗಿ ಸಾಹಿತ್ಯೋತ್ಸವವನ್ನು ಏರ್ಪಡಿಸಲಾಗಿತ್ತು. ೧೪ ರಿಂದ ೧೬ ರ ವರೆಗೆ ನಡೆದ ೩ ದಿನಗಳ ಈ ಸಾಹಿತ್ಯೋತ್ಸವದಲ್ಲಿ ಡಾ.ಚಂದ್ರಶೇಖರ ಕಂಬಾರ, ಡಾ.ಕಮಲಾ ಹಂಪನಾ, ವಾಸುದೇವನ್ ನಾಯರ್,ಚಂದ್ರ ಪ್ರಕಾಶ್, ಗಿರಡ್ಡಿ ಗೋವಿಂದರಾಜು, ವೀರೇಂದ್ರ ಕುಮಾರ್ ಮುಂತಾದವರು ಭಾಗವಹಿಸಿದ್ದರು.

ನಾನು ೨೦೦೯ ರಿಂದ ಬೆಂಗಳೂರು ಪುಸ್ತಕೋತ್ಸವದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ೨೦೦೯,೨೦೧೦,೨೦೧೧ ರಂತೆ ಈ ಬಾರಿಯು, ಪುಸ್ತಕೋತ್ಸವಕ್ಕೆ ಹೋಗಿ ಪುಸ್ತಕಗಳನ್ನು ಕೊಂಡುಕೊಂಡೆ.

ಒಂದು ಪ್ರಾದೇಶಿಕ ಭಾಷೆಯ ಪುಸ್ತಕಗಳು, ಬೇರೊಂದು ರಾಜ್ಯದಲ್ಲಿ ದೊರೆಯುವುದು ಇಂತಹ ಪುಸ್ತಕೋತ್ಸವಗಳಿಂದ ಮಾತ್ರ. ಬೇರೆ ರಾಜ್ಯದಲ್ಲಿ ಬದುಕುವ ಜನರು, ತಮ್ಮ ಭಾಷೆಯ ಪುಸ್ತಕಗಳನ್ನು ಕೊಂಡುಕೊಳ್ಳಲು ಇಂತಹ ಪುಸ್ತಕೋತ್ಸವಗಳು ಸಹಕಾರಿಯಾಗಿವೆ.

ನಾನು ಕನ್ನಡ, ಇಂಗ್ಲೀಷ್ ಪುಸ್ತಗಳನ್ನು ಓದುವುದರೊಂದಿಗೆ ತಮಿಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳಸಿಕೊಂಡು ಬಂದಿರುವುದರಿಂದ, ವರ್ಷಕ್ಕೆ ಒಮ್ಮೆ ಪುಸ್ತಕೋತ್ಸವಕ್ಕೆ ಹೋಗಿ ತಮಿಳು ಪುಸ್ತಕಗಳನ್ನು ಕೊಂಡುಕೊಳ್ಳುವುದು ನನ್ನ ವಾಡಿಕೆಯಾಗಿದೆ. ಅದರಂತೆ ಈ ವರ್ಷವೂ, ಕೆಲವು ತಮಿಳು ಪುಸ್ತಕಗಳನ್ನು ಖರೀದಿಸಿದೆ.

ಸಾಹಿತ್ಯೋತ್ಸವದಲ್ಲಿ, ಸಾಹಿತ್ಯ ವಲಯದ ಪ್ರಮುಖರು ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಕನ್ನಡದಿಂದ ಬೇರೆ ಭಾಷೆಗಳಿಗೆ ಭಾಷಾಂತರದ ಬಗ್ಗೆ, ಈಗಿನ ಯುವ ಲೇಖಕರು ಭಾಷಾಂತರವನ್ನು ಕೈಗೆತ್ತಿಕೊಂಡು ಕನ್ನಡದ ಉತ್ತಮ ಕೃತಿಗಳನ್ನು ಬೇರೆ ಭಾಷೆಗಳಿಗೆ ಭಾಷಾಂತರಿಸಬೇಕು ಎಂಬುದರ ಬಗ್ಗೆ ವಿವಾದಿಸಲಾಯಿತು.

ಕನ್ನಡವನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಮಾತನಾಡಿದ ಜಸ್ಟಿಸ್ ದೇಸಾಯಿಯವರು, ನಮ್ಮ ಮನೆಗಳಲ್ಲಿ ಕನ್ನಡವನ್ನು ಉಳಿಸಿಕೊಲ್ಲುವದರ ಬಗ್ಗೆ ಹೇಳುತ್ತಾ, ತಮ್ಮ ನಾಲ್ವರು ಮೊಮ್ಮಕ್ಕಳಿಗೆ ಕನ್ನಡ ಮಾತನಾಡಲು ಸಹ ಕಷ್ಟಪದುವುದರ ಬಗ್ಗೆ ಬೇಸರಮಾಡಿಕೊಂಡು, ಮುಂದಿನ ಪೀಳಿಗೆಯಲ್ಲಿ ಕನ್ನಡವನ್ನು ಮಾತನಾಡುವವರೇ ಇಲ್ಲವಾಗುತ್ತಾರೆನೋ ಎಂದು ಆತಂಕ ವ್ಯಕ್ತಪಡಿಸಿದರು.

ಅದೇ ರೀತಿ ಯುವ ಲೇಖಕರಿಗೆ ಸರಿಯಾದ ಮಾರ್ಗದರ್ಶನ ಹಾಗು ಪ್ರೋತ್ಸಾಹ ದೊರೆಯದೆಯಿರುವುದು, ವಿಮರ್ಶಾ ಕ್ಷೇತ್ರದಲ್ಲಿನ ಸಮಸ್ಯೆಗಳು, ಕನ್ನಡ ಪುಸ್ತಕಗಳ ಬಗೆಗೆ ಜನರಿಗಿರುವ ಉದಾಸೀನ ಭಾವ, ಸಾಹಿತ್ಯೋತ್ಸವ ಹಾಗು ಪುಸ್ತಕೋತ್ಸವಕ್ಕೆ ಸಿಗುತ್ತಿರುವ ನೀರಸ ಪ್ರತಿಕ್ರಿಯೆ, ಹೀಗೆ ಹಲವಾರು ವಿಷಗಳ ಬಗ್ಗೆ ಚರ್ಚೆ ನಡೆಯಿತು.

ಕಳೆದ ಮೂರು  ಪುಸ್ತಕೋತ್ಸವಗಳಿಗಿಂತ ಈ ವರ್ಷದ  ಪುಸ್ತಕೋತ್ಸವ ನನ್ನ ಪಾಲಿಗೆ ಒಂದು ಮರೆಯಲಾಗದ ಅನುಭವವಾಗಿದೆ. ಕಾರಣ ಜ್ಞಾನ ಪೀಠ ಪ್ರಶಸ್ತಿ ವಿಜೇತ ಲೇಖಕರಾದ ಡಾ.ಚಂದ್ರಶೇಖರ ಕಂಬಾರ ಹಾಗು ಖ್ಯಾತ ಲೇಖಕಿ 
ಡಾ.ಕಮಲಾ ಹಂಪನಾ ಅವರುಗಳೊಂದಿಗೆ ಕೆಲವು ನಿಮಿಷ ಮಾತನಾಡಿ, ಫೋಟೋ ತೆಗೆಸಿಕೊಂಡ ಅವಕಾಶ ದೊರೆತದ್ದು ಈ ಪುಸ್ತಕೊತ್ಸವದಲ್ಲೆ. 

ಕಳೆದ ೧೦ ವರ್ಷಗಳಿಂದ ಬೆಂಗಳೂರಿನಲ್ಲಿ ಪುಸ್ತಕೋತ್ಸವ ನಡೆಯುತ್ತಾ ಬರುತ್ತಿದ್ದರು, ಹಲವರಿಗೆ ಇದರ ಬಗ್ಗೆ ತಿಳಿಯದೆಯಿರುವುದು ಬೇಸರದ ಸಂಗತಿ. ಇದಕ್ಕೆ ಒಂದು ಕಾರಣವೇನೆಂದರೆ ಸರಿಯಾಗಿ  ಜಾಹೀರಾತು ಮಾಡದೆಯಿರುವುದು ಎಂಬುದು ನನ್ನ ಅಭಿಪ್ರಾಯ.

ಜನರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚಾಗಬೇಕು. ಅದರಲ್ಲೂ ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೇಮ ಬೆಳೆಸುವುದು ಅಗತ್ಯವಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಪುಸ್ತಕಗಳನ್ನು ಕೊಂಡುಕೊಂಡಾಗ ಮಾತ್ರ ಪುಸ್ತಕೋತ್ಸವಗಳು  ಯಶಸ್ವಿಯಾಗುತ್ತವೆ. 

ಜನರಲ್ಲಿ ಓದುವ ಆಸಕ್ತಿ ಹೆಚ್ಚಾಗಿ, ನಮ್ಮ ಸಾಹಿತ್ಯ , ಕಲೆ, ಇತಿಹಾಸ, ಜನಪದ, ಸಂಸ್ಕೃತಿ, ರಾಜಕೀಯ, ವಿಶ್ವದ ಇತಿಹಾಸ , ವಿಜ್ಞ್ಯಾನ ,ತಂತ್ರಜ್ಞ್ಯಾನ, ಜನಜೀವನ ಮುಂತಾದ  ಹಲವಾರು ವಿಷಯಗಳ ಬಗ್ಗೆ ತಿಳಿದುಕೊಂಡು ತಮ್ಮ  ಯೋಚನೆ, ಮನೋವೃತ್ತಿ, ಬದುಕುವ ರೀತಿಯನ್ನು ಉತ್ತಮ ಪಡಿಸಿಕೊಳ್ಳಲಿ ಎಂದು ಆಶಿಸುತ್ತಾ, ನಾನು ಸಹ ಅದೇ ಪ್ರಯತ್ನವನ್ನು ಮಾಡುತಿದ್ದೇನೆ ಎಂದು ತಿಳಿಸುತ್ತಿರುವ 

 -   ಸೆಂದಿಲ್ 








Post a Comment

0 Comments