Ticker

6/recent/ticker-posts

ನಾಯಗನ್ - 1987

ಭಾರತೀಯ ಚಿತ್ರರಂಗವು ತನ್ನ 100ನೇ ವರ್ಷದ ಸಂಬ್ರಮದಲ್ಲಿರುವ ಈ ಸಂಧರ್ಬದಲ್ಲಿ , ಭಾರತದ ಅವಿಸ್ಮರಣೀಯ ಚಿತ್ರಗಳಲ್ಲಿ ಒಂದಾದ ಮಣಿರತ್ನಂ ನಿರ್ದೇಶನದ , ಕಮಲ್ ಹಾಸನ್ ರವರ ' ನಾಯಗನ್ ' ಅಕ್ಟೋಬರ್ 21, 2012 ರಂದು, 25 ವರ್ಷಗಳನ್ನು ಪೂರೈಸಿದೆ.

ನಾಯಗನ್, ಅಕ್ಟೋಬರ್ 21, 1987 ರಂದು ಬಿಡುಗಡೆಯಾಯಿತು. ಮುಂಬೈನ ಭೂಗತ ದೊರೆಯಾಗಿದ್ದ, ವರದರಾಜನ್ ಮುದಲಿಯಾರ್ ಅವರ ಜೀವನವೇ ' ನಾಯಗನ್ ' ಚಿತ್ರದ ಕಥಾವಸ್ತು. 

ಬಾಲಕ ವೇಲು, ಯೂನಿಯನ್ ಲೀಡರ್ ಆದ ತನ್ನ ತಂದೆಯನ್ನು ಕೊಂದ, ಪೋಲಿಸನ್ನು ಕೊಂದು, ಬಾಂಬೆಗೆ ಬಂದು ಸೇರುವುದರೊಂದಿಗೆ ಕಥೆ ಆರಂಭವಾಗುತ್ತದೆ. ಇಲ್ಲಿಂದಲೇ ಆರಂಭವಾಗುವ ನಮ್ಮ ಕುತೂಹಲ ಕೊನೆಗೊಳ್ಳುವುದು ಚಿತ್ರದ ಕೊನೆಯಲ್ಲೇ .


ನಾಯಗನ್ ಚಿತ್ರದ ಯಶಸ್ಸಿಗೆ  ಕಾರಣ ಆ ಚಿತ್ರದ ತಂಡ. ಮಣಿರತ್ನಂರವರ ನಿರ್ದೇಶನ, ಇಳಯರಾಜರವರ ಸಂಗೀತಾ, ಪಿ ಸಿ ಶ್ರೀರಾಂರವರ ಛಾಯಾಗ್ರಹಣ, ಲೆನಿನ್ ಮತ್ತು ವಿಜಯನ್ ಅವರುಗಳ ಸಂಕಲನ, ತೋಟ ಧರಣಿ ಅವರ ಕಲೆ, ಬಾಲಕುಮಾರನ್ ಮತ್ತು ಮಣಿರತ್ನಂ ಅವರುಗಳ ಸಂಭಾಷಣೆ ಹಾಗೂ ಎಲ್ಲಾ ನಟರ ನಟನೆ.

ಇಂದು ನಾಯಗನ್ ಚಿತ್ರ ಒಂದು ಅವಿಸ್ಮರಣೀಯ ಚಿತ್ರವಾಗಿದೆ ಆದರೆ ಈ ಚಿತ್ರದ ನಿರ್ಮಾಣದ ವೇಳೆ ಉಂಟಾದ ಅಡೆತಡೆಗಳು ಅಷ್ಟಿಷ್ಟಲ್ಲ. ಅಕ್ಟೋಬರ್ 21, 2012 ರಂದು ಹಿಂದೂ ದಿನಪತ್ರಿಕೆಯಲ್ಲಿ ಸ್ವತಃ ಕಮಲ್ ಹಾಸನ್ ಅವರೇ ಬರೆದ ಲೇಖನದಲ್ಲಿ ನಾಯಗನ್ ಚಿತ್ರದ ನಿರ್ಮಾಣದ ವೇಳೆ ಉಂಟಾದ ತೊಂದರೆಗಳ ಬಗ್ಗೆ ವಿವರಿಸಿದ್ದಾರೆ.

ಚಿತ್ರದ ಚಿತ್ರೀಕರಣವನ್ನು ಮುಂಬೈನಲ್ಲಿ ಮಾಡಬೇಕೆಂದು ಮಣಿ ಮತ್ತು ಕಮಲ್, ಚಿತ್ರದ ನಿರ್ಮಾಪಕರಾಗಿದ್ದ ಮುಕ್ತಾ ಶ್ರೀನಿವಾಸನ್ ಅವರನ್ನು ಕೇಳಿಕೊಂಡಾಗ, ಅವರು ಅದಕ್ಕೆ ಒಪ್ಪಲಿಲ್ಲ. ತನಗೆ ಸುಮಾರು 5 ಲಕ್ಷ ಲಾಭ ಬರುವಂತಹ ಒಂದು ಸಿನಿಮಾ ಮಾಡಿಕೊಟ್ಟರೆ ಸಾಕೆಂಬುದು ಅವರ ನಿಲುವು. ಕೊನೆಗೆ ಕೆಲವು ದೃಶ್ಯಗಳನ್ನು ಮಾತ್ರ ಮುಂಬೈನಲ್ಲಿ ಚಿತ್ರೀಕರಿಸಲು ಸಮ್ಮತಿಸಿದರು.

ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರಿಸಲು, ಇಂಗ್ಲೆಂಡಿನ ಜಿಮ್ ಅಲನ್ ಅವರನ್ನು ಕರೆಸಲಾಯಿತು. 3 ದಿನಗಳ ನಂತರ ನಿರ್ಮಾಪಕರು, ತಾವು ಹೆಚ್ಚು ಹಣವನ್ನು ವ್ಯಯಿಸಲು ಸಿದ್ದವಿಲ್ಲವೆಂದು ಹೇಳಿ,ಜಿಮ್ ಅಲನ್ ಅವರನ್ನು ವಾಪಸ್ಸು ಕಳುಹಿಸಿದರು.

ಮೇಕಪ್ ಹಾಗು ವಸ್ತ್ರವಿನ್ಯಾಸಕ್ಕೆ ಪ್ರತ್ಯೇಕವಾದ ಬಜೆಟ್ ಇಲ್ಲದೆ ಇದ್ದದರಿಂದ ಸ್ವತಹ ಕಮಲ್ ಅವರೇ ಮೇಕಪ್ ಮಾಡಿಕೊಂಡರು. ಅವರ ಪತ್ನಿ ಸರಿಕಾ, ವಸ್ತ್ರವಿನ್ಯಾಸದ ಜವಾಬ್ದಾರಿ ವಹಿಸಿಕೊಂಡರು.

ಸತ್ತು ಹೋದ ತನ್ನ ಮಗನ ಶವವನ್ನು ನೋಡಿ ನಾಯ್ಕರ್ ಅಳುವ ದೃಶ್ಯದ ಚಿತ್ರೀಕರಣಕ್ಕಾಗಿ, ಕಮಲ್ ಹಾಗು ಇತರ ನಟರು ಪೂರ್ವ ಸಿದ್ದತೆ ನಡೆಸಿ, ಟೇಕ್ ತೆಗೆಯಲು ಬಂದಾಗ, ಬೇಸರದಿಂದ ನಿಂತಿದ್ದ ಮಣಿ ಮತ್ತು ಶ್ರೀರಾಮ್ ಅವರನ್ನು ನೋಡಿ, ಏನಾಯಿತು? ಎಂದು ಕಮಲ್ ವಿಚಾರಿಸಿದಾಗ, ಚಿತ್ರೀಕರಣಕ್ಕೆ ಬೇಕಾದ ಫಿಲಂ ಸ್ಟಾಕ್ ಮುಗಿದುಹೋಗಿದೆ . ನಿರ್ಮಾಪಕರು ಮುಂದಿನ  ಸ್ಟಾಕ್ ಸಿಗುವವರಗೆ , ಚಿತ್ರೀಕರಣವನ್ನು ಮುಂದೂಡ ಬೇಕೆಂದು ಹೇಳಿದ್ದಾರೆ ಎಂಬ ವಿಷಯವನ್ನು ತಿಳಿಸಿದರು.
ಕಮಲ್ ಮನ ನೊಂದುಕೊಂಡರು. ಕೂಡಲೇ ತನ್ನ ಆಫೀಸಿಗೆ ಫೋನ್ ಮಾಡಿ, ತಮ್ಮಲ್ಲಿ ಎಷ್ಟು ಫಿಲಂ ಸ್ಟಾಕ್ ಇದೆಯೋ ಅಷ್ಟನ್ನು 20 ನಿಮಿಷಗಳಲ್ಲಿ ತರಬೇಕೆಂದು ಹೇಳಿ, ಫಿಲಂ ಸ್ಟಾಕ್ ತರಿಸಿ ಕೊಂಡು, ಆ ದೃಶ್ಯವನ್ನು ಚಿತ್ರೀಕರಿಸಿದರು. ಆ ದೃಶ್ಯ ಇಂದು ಭಾರತೀಯ ಚಿತ್ರರಂಗದ ಮರೆಯಾಲಾಗದ ದೃಶ್ಯಗಳಲ್ಲಿ ಒಂದಾಗಿ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ.

ಇಳಯರಾಜರವರ ಸಂಗೀತ ನಾಯಗನ್ ಚಿತ್ರದ ಯಶಸ್ಸಿಗೆ ಮತ್ತೊಂದು ಕಾರಣವಾಗಿದೆ. ಚಿತ್ರದ ಹಿನ್ನಲೆ ಸಂಗೀತ ನಮ್ಮನ್ನು ಭಾವುಕರನ್ನಾಗಿ ಮಾಡುತ್ತದೆ. 'ತೆನ್ ಪಾಂಡಿ ಚೀಮಯಿಲೆ' ಹಾಡು ಕಮಲ್ ಹಾಗು ಇಳಯರಾಜರವರ ಧ್ವನಿಯಲ್ಲಿ,ನಮ್ಮ ಕಣ್ಣುಗಳಲ್ಲಿ ನೀರು ತುಂಬಿಸುತ್ತದೆ.

ನಾಯಗನ್ ಚಿತ್ರದ ಸಂಭಾಷಣೆ ಮರೆಯುವಂತಿಲ್ಲ. ನಾನ್ ಅಡಿಚ , ನೀ ಸೆತ್ತುರುವೆ (ನಾನು ಹೊಡೆದರೆ , ನೀನು ಸತ್ತು ಹೋಗುವೆ ) , ನಾಲು ಪೇರುಕು ಒದವುದಿನ್ನ, ಎದುವುಂ ತಪ್ಪಿಲ್ಲೈ (ನಾಲ್ಕು ಜನಕ್ಕೆ ಉಪಯೋಗವಾಗುವುಧಾದರೆ , ಯಾವುದು ತಪ್ಪಿಲ್ಲ ), ನೀಂಗ ನಲ್ಲವರ? ಕೆಟ್ಟವರ ? (ನೀವು ಒಳ್ಳೆಯವರ ? ಕೆಟ್ಟವರ?) ಮುಂತಾದ ಡಯಲಾಗ್ ಗಳು ಇಂದಿಗೂ ಪ್ರಸಿದ್ದವಾಗಿವೆ.

ಚಿತ್ರದ ಕ್ಲೈಮಾಕ್ಸ್ ನಲ್ಲಿ, ನಾಯಕರ ಮೊಮ್ಮಗ, ನಾಯಕರನ್ನು  ನೀಂಗ ನಲ್ಲವರ? ಕೆಟ್ಟವರ ? (ನೀವು ಒಳ್ಳೆಯವರ ? ಕೆಟ್ಟವರ?) ಎಂದು ಕೇಳುವ ದೃಶ್ಯ , ನಮ್ಮ ಮನದಲ್ಲಿ ನಾಯಕರ ಪಾತ್ರದ ಬಗ್ಗೆ ಏಳುವ ಪ್ರಶ್ನೆಯನ್ನು, ಮಣಿ ರತ್ನಂ ನಾಯಕರ ಮೊಮ್ಮಗ ನ ಪಾತ್ರದ ಮೂಲಕ ಕೇಳಿಸಿರುವುದು, ನಿರ್ದೇಶಕರ ಜಾಣ ತನ.


2005 ರಲ್ಲಿ , ಟೈಮ್ಸ್ ಪತ್ರಿಕೆ ಪ್ರಕಟಿಸಿದ ಆಲ್ ಟೈಮ್ 100 ಬೆಸ್ಟ್ ಫಿಲಮ್ಸ್ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಹೆಗ್ಗಳಿಕೆ ನಾಯಗನ್ ಚಿತ್ರದ್ದು. 

ನಾಯಗನ್ ನಂತರ, ಕಮಲ್ ಹಾಸನ್ ಮತ್ತು ಮಣಿ ರತ್ನಂ, ಒಂದಾಗಿ ಚಿತ್ರ ನಿರ್ಮಿಸಿಲ್ಲ. ನಾಯಗನ್ ಅನ್ನು ಮೀರಿಸುವಂತಹ  ಚಿತ್ರದಲ್ಲೇ ಇಬ್ಬರು ಸೇರಿ ಕೆಲಸ ಮಾಡಬೇಕು ಎಂಬುದು ಇಬ್ಬರ ನಿಲುವು. 25 ವರ್ಷಗಳು ನಂತರವಾದರೂ ಅಂತಹ ಮತ್ತೊಂದು ಉನ್ನತ ಚಿತ್ರವನ್ನು ಇಬ್ಬರು ಸೇರಿ ಮಾಡಬೇಕೆಂಬುದು ನಮ್ಮ ಆಸೆ.

 ಕಮಲ್ ಹಾಸನ್ ಅವರ 'ವಿಶ್ವರೂಪಂ'  ಹಾಗು ಮಣಿ ರತ್ನಂ ಅವರ 'ಕಡಲ್ ' ಚಿತ್ರಗಳು ಯಶಸ್ವಿಯಾಗಲೆಂದು  ಹರಸೋಣ.

ಎಷ್ಟೇ ವರ್ಷಗಳು ಕಳೆದರೂ , ಕೆಲವು ಚಿತ್ರಗಳನ್ನು ಮರೆಯಲು ಸಾಧ್ಯವಿಲ್ಲಾ , 'ನಾಯಗನ್' ಚಿತ್ರ ರಸಿಕರ ಮನದಲ್ಲಿ ಸದಾ ನಾಯಕನಾಗಿ ಉಳಿದಿರುತ್ತದೆ.

ವೇಲು ಬೈ , ಜಿಂದಾಬಾದ್ .




Post a Comment

2 Comments

  1. A master piece. Ulaganayan, Mani Rathnam and Ilayaraja rocks.

    ReplyDelete
  2. Nayagan is a cinematic brilliance. it makes me emotional. the acting, music, cinematography, direction everything about this movie is brilliant.

    people say the it is copied from god father. whatever it is 'Nayaga'n is one of the greatest movie made in India.

    ReplyDelete

Comment is awaiting for approval