ನಟ ಮಿಥುನ್ ಚಕ್ರವರ್ತಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ | Dadasaheb Phalke Award for Mithun Chakraborty
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 8 ರಂದು ನಡೆಯಲಿದೆ. ಕೆಲವು ದಿನಗಳ ಹಿಂದೆ ಅಷ್ಟೇ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಘೋಷಿಸಿಲಾಗಿತ್ತು. ಪ್ರತಿ ವರ್ಷ ಈ ಸಮಾರಂಭದಲ್ಲಿ ಪ್ರತಿಷ್ಠಿತ ಚಲನಚಿತ್ರ ವ್ಯಕ್ತಿಯನ್ನು ಆಯ್ಕೆ ಮಾಡಿ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ನೀಡಲಾಗುವುದು.
2022 ರ ಈ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರಿಗೆ ಘೋಷಿಸಲಾಗಿದೆ. ಅಕ್ಟೋಬರ್ 8 ರಂದು ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಮೃಣಾಲ್ ಸೇನ್ ನಿರ್ದೇಶಿಸಿದ ಮೃಗಯಾ (1976) ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಿಥುನ್ ಚಕ್ರವರ್ತಿ, ಚೊಚ್ಚಲ ಚಿತ್ರದಲ್ಲೇ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದರು. 1982 ರ ಚಲನಚಿತ್ರ ಡಿಸ್ಕೋ ಡ್ಯಾನ್ಸರ್‌ನೊಂದಿಗೆ ಹೆಚ್ಚಿನ ಖ್ಯಾತಿಯನ್ನು ಗಳಿಸಿ, ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ.
ಮಿಥುನ್ ಚಕ್ರವರ್ತಿ ಅವರು 16 ಜೂನ್ 1950 ರಂದು ಭಾರತದ ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ (ಈಗ ಕೋಲ್ಕತ್ತಾ) ಬಂಗಾಳಿ ಹಿಂದೂ ಕುಟುಂಬದಲ್ಲಿ ಬಸಂತ ಕುಮಾರ್ ಚಕ್ರವರ್ತಿ ಮತ್ತು ಶಾಂತಿ ರಾಣಿ ಚಕ್ರವರ್ತಿ ದಂಪತಿಗೆ ಜನಿಸಿದರು. ಅವರು ಓರಿಯಂಟಲ್ ಸೆಮಿನರಿಯಲ್ಲಿ ಅಧ್ಯಯನ ಮಾಡಿದರು ಮತ್ತು ನಂತರ ತಮ್ಮ ಬಿ.ಎಸ್ಸಿ. ಪದವಿ ಯನ್ನು ಕೋಲ್ಕತ್ತಾದ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪಡೆದರು. ಅದರ ನಂತರ, ಅವರು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದರು.48 ವರ್ಷಗಳಿಂದ ಬಾಲಿವುಡ್‌ನಲ್ಲಿ ನಿರಂತರವಾಗಿ ನಟಿಸುತ್ತಿರುವ ಮಿಥುಮ್ ಚಕ್ರವರ್ತಿ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಿಲಾಗಿದೆ.
ಮಿಥುಮ್ ಚಕ್ರವರ್ತಿ ನಟನೆ ಮಾತ್ರವಲ್ಲದೆ ರಾಜಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು 2021 ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ 7 ಮಾರ್ಚ್ 2021 ರಂದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು.
ನಟ ಮಿಥುನ್ ಚಕ್ರವರ್ತಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಿರುವುದರ ಬಗ್ಗೆ ಪೋಸ್ಟ್ ಮಾಡಿರುವ, ಮಾಹಿತಿ ಮತ್ತು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ 'ಮಿಥುನ್ ಅವರ ಸಿನಿಮಾ ಪಯಣ ಹಲವು ತಲೆಮಾರಿಗೆ ಸ್ಪೂರ್ತಿ ನೀಡಿದ್ದು, ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ‘ದಾದಾ ಸಾಖೆ ಫಾಲ್ಕೆ’ ಪ್ರಶಸ್ತಿಯನ್ನು ತೀರ್ಪುಗಾರರು ಘೋಷಿಸಿದ್ದಾರೆ'. ಎಂದಿದ್ದಾರೆ.
ಭಾರತೀಯ ಚಲನಚಿತ್ರಕ್ಕೆ ದಾದಾಸಾಹೇಬ್ ಫಾಲ್ಕೆ ಅವರ ಕೊಡುಗೆಯನ್ನು ಸ್ಮರಿಸಲು ಭಾರತ ಸರ್ಕಾರವು ಈ ಪ್ರಶಸ್ತಿಯನ್ನು ಪರಿಚಯಿಸಿತು. 1969 ರಲ್ಲಿ ಮೊದಲ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನಟಿ ದೇವಿಕಾ ರಾಣಿ ಅವರಿಗೆ ನೀಡಿ ಗೌರವಿಸಲಾಗಿತ್ತು. ಇಲ್ಲಿಯವರೆಗೂ ೫೩ ಕಲಾವಿದರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ೧೯೯೫ ರಲ್ಲಿ ಡಾ. ರಾಜಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
0 Comments
Comment is awaiting for approval