Ticker

6/recent/ticker-posts

ಕವಿ ಕಯ್ಯಾರ ಕಿಞ್ಞಣ್ಣ ರೈ ಇನ್ನಿಲ್ಲ

ಕವಿ ಹಾಗು  ಸ್ವಾತಂತ್ರ್ಯ ಹೋರಾಟಗಾರ ಕಯ್ಯಾರ ಕಿಞ್ಞಣ್ಣ ರೈ, ಭಾನುವಾರ ಕಾಸರಗೋಡು, ಬದಿಯಡ್ಕದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 101 ವರ್ಷ ವಯಸ್ಸಾಗಿತ್ತು . ಕಳೆದ ಜೂನ್ ೮ ರಂದು ತಮ್ಮ ೧೦೦ ನೆ ಜನ್ಮ ದಿನವನ್ನು ಆಚರಿಸಿದ ಕವಿ ನಿನ್ನೆ ಇಹ ಲೋಕವನ್ನು ತ್ಯಜಿಸಿದರು.

ಕಯ್ಯಾರ ಕಿಞ್ಞಣ್ಣ ರೈ, ಕಾಸರಗೋಡಿನ ಪೆರಡಾಲ ಹಳ್ಳಿಯಲ್ಲಿ ದುಗ್ಗಪ್ಪ ರೈ ಮತ್ತು ದೇಯ್ಯಕ್ಕ ರೈ ದಂಪತಿಗಳಿಗೆ 1915ರ ಜೂನ್ 8 ರಂದು ಜನಿಸಿದರು.  ಅವರ  ಮನೆ ಮಾತು ತುಳು. ಕಿಞ್ಞಣ್ಣ ಎಂದರೆ  ತುಳುವಿನಲ್ಲಿ ಕಿರಿಯವನು ಎಂದರ್ಥ. ಶಾಲೆಯಲ್ಲಿ  ಕನ್ನಡವನ್ನು ಕಲಿತ ರೈ ಅವರು ಮಲೆಯಾಳಂ, ಮತ್ತು ಸಂಸ್ಕೃತವನ್ನು ಸಹ ಬಲ್ಲವರಾಗಿದ್ದರು. ತಮ್ಮ ೧೨ನೆ ವಯಸ್ಸಿನಲ್ಲಿ 'ಸುಶೀಲಾ ' ಎಂಬ ಕೈ ಬರಹದ ಪತ್ರಿಕೆಯನ್ನು ಹೊರ ತಂದರು. ಗಾಂಧೀಜಿಯವರ ಪ್ರಭಾವದಿಂದ ಸ್ವತಂತ್ರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡ ರೈ ಅವರು, ಈ ಸಮಯದಲ್ಲಿ ಅವರು ಉನ್ಯಕ್ಕ ಎಂಬವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಕಯ್ಯಾರರು, ೧೯೬೯ ರಲ್ಲಿ ಉತ್ತಮ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದವರು.  ನವಜೀವನ ಹೈಸ್ಕೂಲಿನ ಶಿಕ್ಷಕರಾಗಿದ್ದ ಕಯ್ಯಾರರು ಪ್ರವೃತ್ತಿಯಲ್ಲಿ ಪತ್ರಿಕೋದ್ಯಮಿಯಾಗಿ ಕೂಡಾ ಕೊಡುಗೆ ಸಲ್ಲಿಸಿದ್ದಾರೆ. ಅವರು ವೃತ್ತ ಪತ್ರಿಕೆಗಳಲ್ಲಿ ಅನೇಕ ಲೇಕನಗಳನ್ನು ಬರೆದರು. ‘ಸ್ವದೇಶಾಬಿಮಾನಿ, ‘ಪ್ರಭಾತ,'ದಿ ಹಿಂದೂ ','ಮದ್ರಾಸ್ ಮೇಲ್' ಇತ್ಯಾದಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ‘ಶ್ರೀಮುಖ, ಎಂಬ ತಮ್ಮ ಚೊಚ್ಚಲ ಕವನ ಸಂಗ್ರಹ ದಿಂದಲೇ ಪ್ರಸಿದ್ದಿಗೆ ಬಂದ ಕವಿ ಕಯ್ಯಾರ ಕಿಞ್ಞಣ್ಣ ರೈ .
ಶ್ರೀಮುಖ, ಐಕ್ಯಗಾನ, ಪುನರ್ನವಚೇತನ, ಕೊರಗ, ಇವು ಇವರ ಕವನ ಸಂಕಲನಗಳು.  ಲಕ್ಷ್ಮೀಷನ ಕಥೆಗಳು, ಪರಶುರಾಮ ಇವರ ಕಥಾಸಂಕಲನಗಳಾಗಿವೆ.

ರಾಷ್ಟ್ರಕವಿ ಗೋವಿಂದ ಪೈ, ಗೋವಿಂದ ಪೈ ಸ್ಮೃತಿ ಕೃತಿ, ಸಾಹಿತ್ಯದೃಷ್ಟಿ, ಮಲಯಾಳಂ ಸಾಹಿತ್ಯಚರಿತ್ರೆ, ಮಹಾಕವಿ ಗೋವಿಂದ ಪೈ ಕಾರ್ನಾಡು ಸದಾಶಿವರಾವ್, ಸಂಸ್ಕೃತಿಯ ಹೆಗ್ಗುರುತು, ಇವು ಇವರ ಕೃತಿಗಳು. ದುಡಿತವೆ ನನ್ನ ದೇವರು ಎನ್ನುವದು ರೈಯವರ ಆತ್ಮಕಥನ.

ಇವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಮದ್ರಾಸ್ ಸರ್ಕಾರದ ಮತ್ತು ಮೈಸೂರು ಸರ್ಕಾರದ ಬಹುಮಾನ ನೀಡಿ ಗೌರವಿಸಲಾಗಿದೆ. ೧೯೭೦ ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಇವರನ್ನು ಮಂಗಳೂರಿನಲ್ಲಿ ನಡೆದ ಅರವತ್ತಾರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದರು. ರೈಯವರಿಗೆ 'ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ, 'ನಾಡೋಜ'ಪ್ರಶಸ್ತಿ, ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಪಂಪ ಪ್ರಶಸ್ತಿ ಗಳಿಸಿದ್ದರು.

ಕಾಸರಗೋಡಿನ ಕನ್ನಡಪರ ಹೋರಾಟದಲ್ಲಿ ಕೇಳಿ ಬರುವ ಮೊದಲ ಹೆಸರು ಕಯ್ಯಾರ ಕಿಞ್ಞಣ್ಣ ರೈ. ಕಾಸರಗೋಡು ಜಿಲ್ಲೆಯು ಕರ್ನಾಟಕದ ಭಾಗವಾಗಿದ್ದ ಕಾಲದಿಂದಲೂ ತಮ್ಮ ಸಾಹಿತ್ಯ, ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡವರು. ಕನ್ನಡನಾಡಿನ ಭಾಗವಾಗಿದ್ದ ಕಾಸರಗೋಡು ಕೇರಳಕ್ಕೆ ಸೇರಿದಾಗ ಕನ್ನಡಿಗರನ್ನು ಸಂಘಟಿಸಿ ಹೋರಾಟ ಮಾಡಿದರೂ ಯಶಸ್ಸು ಸಿಗಲಿಲ್ಲ . ರಾಜ್ಯ ಗುರುತಿಸುವಿಕೆಯು ಭಾಷಾವಾರು ಆದ್ಯತೆಯ ಮೇಲೆ ಸರಿಯಾಗಿ ಆಗಿಲ್ಲ.  ಕಾಸರಗೋಡು ಕನ್ನಡನಾಡಿಗೆ ಸೇರಿದರೆ ಅದೇ ನನ್ನ ಸಿಗುವ ದೊಡ್ಡ ಬಹುಮಾನ ಎಂದು ಹೇಳುತ್ತಿದ್ದ ರೈಗಳು ಈಗ ನೆನಪು ಮಾತ್ರ.


ಕನ್ನಡದ ಕಟ್ಟಾಬಿಮಾನಿ, ಸತ್ಯಶೋಧರಕರ ದೃಷ್ಟಿ, ನೇರನುಡಿಗೆ ಹೆಸರಾದ ಕಯ್ಯಾರಕಿಙ್ಞಣ್ಣ ರೈ ತಮ್ಮ ಎತ್ತರದಷ್ಟೇ ಜೀವನದ ಎತ್ತರ ನಿಲುವು ಹೊಂದಿದ್ದವರು . ಕಯ್ಯಾರರು ಏನು ಬರೆದರೂ ಅಲ್ಲಿ ಕನ್ನಡತನ, ಕನ್ನಡಮನ ಕಾಣುತ್ತದೆ.

ಕಯ್ಯಾರ ಕಿಞ್ಞಣ್ಣ ರೈ ಕವಿ, ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕ,  ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕರಾಗಿ ಸದಾಕಾಲ ಸ್ಮರಣೀಯರು.

ಬದಿಯಡ್ಕ ಸಮೀಪದ ಪೆರಡಾಲ ಎಂಬ ಗ್ರಾಮದಲ್ಲಿರುವ ಕವಿತಾ ಕುಟೀರದಲ್ಲಿ ಪತ್ನಿ ಉಞ್ಞಕ್ಕ ಮತ್ತು ಎಂಟು ಮಕ್ಕಳ ಸುಖೀ ಸಂಸಾರದ ತುಂಬು ಜೀವನವನ್ನು ನಡೆಸಿದ ಕಯ್ಯಾರ ಕಿಞ್ಞಣ್ಣ ರೈ ಕನ್ನಡ ಜನರ ಮನದಲ್ಲಿ ಸದಾ ನೆನಪಿನಲ್ಲಿ ಉಳಿಯಬೇಕು ಎಂಬುದೇ ನಮ್ಮ ಆಶಯ.


Want to write a unique article ?
Click here to start automatically spinning your articles by using the latest Spin Rewriter 5.0 Technology.



Post a Comment

0 Comments