Ticker

6/recent/ticker-posts

ಡಿಂಬದಲ್ಲಿರುವ ಜೀವ ಕಂಬಸೂತ್ರ ಗೊಂಬೆಯಂತೆ - ಕನಕದಾಸರು

ಡಿಂಬದಲ್ಲಿರುವ ಜೀವ ಕಂಬಸೂತ್ರ ಗೊಂಬೆಯಂತೆ - ಕನಕದಾಸರು [Dimbadalliruva Jeeva Song Lyrics in Kannada]













ಡಿಂಬದಲ್ಲಿರುವ ಜೀವ ಕಂಬಸೂತ್ರ ಗೊಂಬೆಯಂತೆ
ಎಂದಿಗಾದರೊಂದು ದಿನ ಸಾವು ತಪ್ಪದೂ

ಹುಟ್ಟುತೇನು ತರಲಿಲ್ಲ ಸಾಯುತೇನು ಒಯ್ಯಲಿಲ್ಲ
ಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹ
ಹೊಟ್ಟೆ ಬಲುಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು
ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು

ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರ
ಅರ್ಥಕ್ಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರು
ಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆ
ಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ

ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲ
ಅಣ್ಣತಮ್ಮ ತಾಯಿ ತಂದೆ ಬಯಸಲಾಗದು
ಅನ್ನ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ
ಮಣ್ಣುಪಾಲು ಆದಮೇಲೆ ಯಾರಿಗಾಹುದೊ

ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು
ಚಳ್ಳಪಿಳ್ಳ ಗೊಂಬೆಯಂತೆ ಆಡಿ ಹೋದೆನೆ
ಹಳ್ಳ ಹರಿದು ಹೋಗುವಾಗ ಗುಳ್ಳೆ ಒಂದು ಒಡೆಯುವಂತೆ
ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟ

ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯ
ವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನು
ಕರ್ತೃ ಕಾಗಿನೆಲೆಯಾದಿ ಕೇಶವನ ಚರಣಕಮಲ
ನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ


Post a Comment

0 Comments