Ticker

6/recent/ticker-posts

ಯು.ಆರ್ ಅನಂತಮೂರ್ತಿ - ಭಾವಪೂರ್ವ ಶ್ರದ್ದಾಂಜಲಿ

ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್ ಅನಂತಮೂರ್ತಿ ಅವರ ಸಾವಿನ  ಸುದ್ದಿ ತಿಳಿದು ಬೇಸರವಾಯಿತು. 
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರು ಶುಕ್ರವಾರ ಸಂಜೆ  ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. 

ಅನಂತಮೂರ್ತಿ ಅವರ ಸಾವಿನ  ಸುದ್ದಿ ತಿಳಿದು ಎಷ್ಟು  ಬೇಸರವಾಯಿತೊ, ಅದಕ್ಕಿಂತ  ಹೆಚ್ಚಿನ ಬೇಸರ ತಂದ ಸುದ್ದಿ ಎಂದರೆ , ಅನಂತಮೂರ್ತಿ ಅವರ ಸಾವನ್ನು ಮೂಡಿಗೇರೆ ಹಾಗು ಕೆಲವು ಬೇರೆ ಕಡೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಸುದ್ದಿ.  ಇಂತಹ ಒಂದು ಹೀನ ಕೃತ್ಯವನ್ನು ಮಾಡಿದವರು ಮನುಷ್ಯರಾಗಿರಲು ಅನರ್ಹರು. ನಾಡಿನ ಒಬ್ಬ ಹಿರಿಯ ಸಾಹಿತಿಗೆ, ಈ ರೀತಿಯ ಅವಮಾನ ಮಾಡಿರುವುದು, ನಮಗೆ ನಾವೇ ಅವಮಾನ ಮಾಡಿಕೊಂಡಂತೆ. 

ಧರ್ಮದ ಬಗ್ಗೆ ಮಾತಾಡುವ ಇಂತಹ ನೀಚ ಜಂತುಗಳಿಗೆ ನಾ ಕೇಳುವ ಬಯಸುವ ಪ್ರಶ್ನೆ - ಇದೇನಾ ನೀವು ನಿಮ್ಮ ಧರ್ಮದಿಂದ ಕಲಿತದ್ದು ? ಒಬ್ಬ ವ್ಯಕ್ತಿಯ ಮರಣವನ್ನು ಹೀಗೆ ಆಚರಿಸುವುದೇ ಧರ್ಮವೇ ? 

ಯು.ಆರ್ ಅನಂತಮೂರ್ತಿ ಅವರು ಧರ್ಮದ ಬಗ್ಗೆ ಹಾಗು ಅದರಲ್ಲಿರುವ ಗೊಡ್ಡು ಸಂಪ್ರದಾಯಗಳನ್ನು ಕಟುವಾಗಿ ಟೀಕಿಸಿರಬಹುದು. ಆದರೆ ಅದಕ್ಕೆ  ಅವರ ಮರಣದ ವೇಳೆ ಈ ರೀತಿಯಾಗಿ ನಡೆದುಕೊಳ್ಳುವುದು ನಿಜಕ್ಕೂ ನಾಚಿಕೆಗೇಡು. 

ಯು (ಉಡುಪಿ) ಆರ್ (ರಾಜಗೋಪಾಲಾಚಾರ್ಯ) ಅನಂತಮೂರ್ತಿ ಅವರು ಡಿಸೆಂಬರ್ ೨೧, ೧೯೩೨ ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಹಳ್ಳಿಯಲ್ಲಿ ರಾಜಗೋಪಾಲಾಚಾರ್ಯ ಹಾಗು ಸತ್ಯಮ್ಮ ದಂಪತಿಗಳ ಮಗನಾಗಿ ಜನಿಸಿದರು.

೧೯೭೦ರಿಂದ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನಂತಮೂರ್ತಿಯವರು, ೧೯೮೭ರಲ್ಲಿ ಕೇರಳದ ಕೋಟ್ಟಯಂನ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು. ೧೯೯೨-೯೩ರ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯದ ಅಧ್ಯಕ್ಷರಾಗಿದ್ದರು. ೧೯೯೩ರಲ್ಲಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಅನಂತಮೂರ್ತಿಯವರು ದೇಶವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಜ್ಞಾನಪೀಠ ಪ್ರಶಸ್ತಿ (೧೯೯೪), ಪದ್ಮಭೂಷಣ (೧೯೯೮), ರಾಜ್ಯೋತ್ಸವ ಪ್ರಶಸ್ತಿ (೧೯೮೪), ಮಾಸ್ತಿ ಪ್ರಶಸ್ತಿ (೧೯೮೩) ಇವು ಅನಂತಮೂರ್ತಿಯವರಿಗೆ ಸಂದಿರುವ ಕೆಲವು ಮುಖ್ಯ ಪ್ರಶಸ್ತಿ, ಗೌರವಗಳು.

ಸಂಸ್ಕಾರ, ಘಟಶ್ರಾದ್ಧ, ಬರ, ಅವಸ್ಥೆ, ಮೌನಿ ಚಲನಚಿತ್ರಗಳಾಗಿವೆ.
ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡಿಗೆ ನೀಡಿ ಅದನ್ನು ಶ್ರೀಮಂತ ಗೊಳಿಸಿದ ಯು.ಆರ್ ಅನಂತಮೂರ್ತಿ ಅವರ ಮರಣ ಒಂದು ತುಂಬಲಾರದ ನಷ್ಟ.  ಸದಾ ಸಮಕಾಲೀನ  ಸಾಮಾಜಿಕ ಹಾಗು ರಾಜಕೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅವರು ಯಾವುದೇ ಭಯವಿಲ್ಲದೆ  ತಮ್ಮ ಅಭಿಪ್ರಾಯವನ್ನು ಮುಂದಿಡುತಿದ್ದರು. ಆ ಮೂಲಕ ಅವರು ಹಲವಾರು ಸಮಸ್ಯೆಗಳನ್ನು ಹಾಗು ಶತ್ರುಗಳನ್ನು ಸಂಪಾದಿಸಿಕೊಂಡದ್ದು ವಿಷಾದ.  
ಅನಂತಮೂರ್ತಿಯವರು ಧೈಹಿಕವಾಗಿ ನಮ್ಮನ್ನು ಅಗಲಿದ್ದರು ಅವರ ಬರವಣಿಗೆಯ ಮೂಲಕ ಸದಾ ನಮ್ಮೊಂದಿಗೆ ಬಾಳುತಿರುತ್ತಾರೆ.  ಯು.ಆರ್ ಅನಂತಮೂರ್ತಿ ಅವರಿಗೆ ನನ್ನ ಭಾವಪೂರ್ವ  ಶ್ರದ್ದಾಂಜಲಿ.

More Links
  1. ಡಾ. ಹಾ. ಮಾ. ನಾಯಕ
  2. ಚಂದ್ರಶೇಖರ ಕಂಬಾರ
  3. ಜಿ. ಪಿ. ರಾಜರತ್ನಂ
  4. ತೀ ನಂ ಶ್ರೀ
  5. ಡಿ. ಎಸ್. ಕರ್ಕಿ


Post a Comment

1 Comments

  1. ಯು.ಆರ್ ಅನಂತಮೂರ್ತಿ ಅವರಿಗೆ ನನ್ನ ಭಾವಪೂರ್ವ ಶ್ರದ್ದಾಂಜಲಿ.

    ReplyDelete

Comment is awaiting for approval